ADVERTISEMENT

ಆಕರ್ಷಿಸಲಿ, ಸುರಕ್ಷತೆಗೂ ಆದ್ಯತೆ ಇರಲಿ

ದಸರಾ ದೀಪಾಲಂಕಾರ– 2025 ಕುರಿತು ಸಭೆ ನಡೆಸಿದ ಮುನಿಗೋಪಾಲರಾಜು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:01 IST
Last Updated 9 ಆಗಸ್ಟ್ 2025, 3:01 IST
ಮೈಸೂರಿನಲ್ಲಿ ಶುಕ್ರವಾರ ನಡೆದ ದಸರಾ ದೀಪಾಲಂಕಾರ ಪೂರ್ವಭಾವಿ ಸಭೆಯಲ್ಲಿ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ಮಾತನಾಡಿದರು
ಮೈಸೂರಿನಲ್ಲಿ ಶುಕ್ರವಾರ ನಡೆದ ದಸರಾ ದೀಪಾಲಂಕಾರ ಪೂರ್ವಭಾವಿ ಸಭೆಯಲ್ಲಿ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ಮಾತನಾಡಿದರು   

ಮೈಸೂರು: ‘ಈ ಬಾರಿಯ ದಸರಾ ವಿದ್ಯುತ್‌ ದೀಪಾಲಂಕಾರ ಆಕರ್ಷಕವಾಗಿರಬೇಕು, ವಿನೂತನವಾಗಿರಬೇಕು. ಅಂತೆಯೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ಗುತ್ತಿಗೆದಾರರಿಗೆ ಸೂಚಿಸಿದರು.

ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಕಳೆದ ವರ್ಷಕ್ಕಿಂತ ಹೆಚ್ಚು ಆಕರ್ಷಕಗೊಳಿಸುವಂತೆ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಿಗಮದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಡ್ರೋನ್‌ ಪ್ರದರ್ಶನಕ್ಕೆ ಮೆರುಗು:

‘ಕಳೆದ ದಸರಾ ಸಂದರ್ಭದಲ್ಲಿ ನಡೆದ ಡ್ರೋನ್‌ ಪ್ರದರ್ಶನ ಎಲ್ಲರ ಆಕರ್ಷಣೆ ಮತ್ತು ಮೆಚ್ಚುಗೆ ಪಡೆದಿತ್ತು. ಈ ಬಾರಿಯೂ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಆದ್ದರಿಂದ, ಕಳೆದ ಬಾರಿಗಿಂತ ಜಾಸ್ತಿ ಡ್ರೋನ್‌ಗಳನ್ನು ಬಳಸಿ ಹೆಚ್ಚು ಆಕರ್ಷಣೀಯವಾಗಿಸಲು ಚಿಂತನೆ ನಡೆಸಲಾಗಿದೆ’ ಎಂದರು.

‘ದಸರಾ ದೀಪಾಲಂಕಾರವು ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಲು ಸೆಸ್ಕ್‌ ಜೊತೆಗೆ ವಿದ್ಯುತ್‌ ಗುತ್ತಿಗೆದಾರರು ಪ್ರಮುಖ ಕಾರಣರಾಗಿದ್ದಾರೆ. ಪ್ರತಿ ವರ್ಷದ ರೀತಿಯಲ್ಲಿ ಈ ಬಾರಿಯೂ ಸಹ ವಿದ್ಯುತ್‌ ದೀಪಾಲಂಕಾರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಉತ್ಸವದ ಆರಂಭದಲ್ಲಿ ಹಾಗೂ ದಸರಾ ಮುಗಿದ ಬಳಿಕವೂ ದೀಪಾಲಂಕಾರ ಇರಲಿದೆ. ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲೂ  ನಿರ್ವಹಿಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪೂರ್ವಸಿದ್ಧತೆ ಇರಲಿ:

‘ಮಹೋತ್ಸವದ ಆರಂಭದಿಂದಲೇ ವಿದ್ಯುತ್‌ ದೀಪಾಲಂಕಾರಕ್ಕೂ ಚಾಲನೆ ದೊರೆಯಲಿದೆ. ಹೀಗಾಗಿ ದೀಪಾಲಂಕಾರದ ಜವಾಬ್ದಾರಿ ಹೊತ್ತವರು ಕೊನೆಯ ಹಂತದವರೆಗೂ ಕೆಲಸ ಮಾಡದೆ, ಕೆಲವು ದಿನಗಳಿಗೆ ಮುನ್ನವೇ ಎಲ್ಲವನ್ನೂ ತಯಾರಿ ಮಾಡಿಕೊಳ್ಳಬೇಕು.  ಕಳೆದ ಬಾರಿ ಕೆಲವೊಂದು ರಸ್ತೆಗಳಲ್ಲಿ ಮಾಡಲಾಗಿದ್ದ ದೀಪಾಲಂಕಾರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಹೀಗಾಗಿ ಈ ಬಾರಿ ಇಂತಹ ಸಮಸ್ಯೆಗಳು ಆಗದಂತೆ ನಿಗಾ ವಹಿಸಿ, ನಿಗದಿತ ಸಮಯಕ್ಕೆ ಕೆಲಸಗಳನ್ನು ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

‘ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಸುತ್ತಲಿನ ರಸ್ತೆಗಳು ಹಾಗೂ ವೃತ್ತಗಳಲ್ಲಿ  ಹೆಚ್ಚಿನ ಆಕರ್ಷಣೆಯಿಂದ ಕೂಡಿರಬೇಕಿದೆ. ಯುವ ಸಂಭ್ರಮ ದಸರಾ ಆರಂಭಕ್ಕೂ ಮೊದಲೇ ಶುರುವಾಗುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಮಾಡಲಾಗುವ ದೀಪಾಲಂಕಾರ ಎಲ್ಲರ ಆಕರ್ಷಣೆ ಮತ್ತು ಕುತೂಹಲವನ್ನು ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮೈಸೂರು ವಲಯ ಕಚೇರಿಯ ಮುಖ್ಯ ಎಂಜಿನಿಯರ್‌ ಮೃತ್ಯುಂಜಯ, ಮೈಸೂರು ವೃತ್ತದ ಎಸ್‌ಇ ಸುನೀಲ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್‌, ಅಧಿಕಾರಿಗಳು ಹಾಗೂ ವಿದ್ಯುತ್‌ ಗುತ್ತಿಗೆದಾರರು ಪಾಲ್ಗೊಂಡಿದ್ದರು.

‘ತೊಂದರೆಯಾಗದಂತೆ ನೋಡಿಕೊಳ್ಳಿ’ ‘

ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದವನ್ನು ಹೆಚ್ಚಿಸುವ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುವುದು ಮುಖ್ಯವಾಗುತ್ತದೆ. ದಸರಾ ವೇಳೆಯಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರಲಿದೆ. ಆದ್ದರಿಂದ ಮಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಎಚ್ಚರ ವಹಿಸಬೇಕು’ ಎಂದು ಮುನಿಗೋಪಾಲರಾಜು ವಿದ್ಯುತ್‌ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ‘ದಸರಾ ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಈ ಬಾರಿ ಆಕರ್ಷಕ ರೀತಿಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ. ಜೊತೆಗೆ ನಗರದಲ್ಲಿರುವ ವೃತ್ತಗಳಲ್ಲಿ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ರೂಪರೇಷೆಗಳು ಕೆಲವೊಂದು ವಿನ್ಯಾಸಗಳನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.