ADVERTISEMENT

ದ್ವಿತೀಯ ಪಿಯು ಪರೀಕ್ಷೆ: ಮೈಸೂರು ಜಿಲ್ಲೆಯನ್ನು ಟಾಪ್‌ 10ಗೆ ತರಲು ಕಸರತ್ತು

ಮಾರ್ಚ್ 9ರಿಂದ ಪರೀಕ್ಷೆ; 30,416 ವಿದ್ಯಾರ್ಥಿಗಳು ನೋಂದಣಿ, 50 ಕೇಂದ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 15:42 IST
Last Updated 25 ಫೆಬ್ರುವರಿ 2023, 15:42 IST
ನಾಗಮಲ್ಲೇಶ್
ನಾಗಮಲ್ಲೇಶ್   

ಮೈಸೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯನ್ನು ಟಾಪ್‌–10ಗೆ ತರಲು ಗುರಿ ಹೊಂದಲಾಗಿದೆ.

ಪ್ರಸಕ್ತ ಸಾಲಿನ ಪರೀಕ್ಷೆಯು ಮಾರ್ಚ್‌ 9ರಿಂದ ಮಾರ್ಚ್‌ 29ರವರೆಗೆ ನಿಗದಿಯಾಗಿದೆ. 2020ರಲ್ಲಿ ಶೇ 67.98ರಷ್ಟು ಫಲಿತಾಂಶ ಪಡೆದು 15ನೇ ಸ್ಥಾನ ಹಾಗೂ 2022ರಲ್ಲಿ ಶೇ 64.45ರಷ್ಟು ಫಲಿತಾಂಶ ದಾಖಲಿಸಿ 17ನೇ ಸ್ಥಾನ ಪಡೆದಿತ್ತು. ಕುಸಿತದ ಹಾದಿಯಲ್ಲಿಯೇ ಇರುವ ಜಿಲ್ಲೆಯನ್ನು ಮೇಲೆತ್ತಲು ಕಾಲೇಜುಗಳ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಉನ್ನತ ಶಿಕ್ಷಣದಲ್ಲಿ ಯಾವ ಕೋರ್ಸ್‌ ಸೇರಬೇಕು ಎನ್ನುವುದನ್ನು ನಿರ್ಧರಿಸುವ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳೂ ಸಜ್ಜಾಗುತ್ತಿದ್ದಾರೆ.

ಈ ಬಾರಿ 14,249 ಬಾಲಕರು ಮತ್ತು 16,167 ಬಾಲಕಿಯರು ಸೇರಿ 30,416 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 79 ಸರ್ಕಾರಿ, 31 ಅನುದಾನಿತ ಮತ್ತು 151 ಖಾಸಗಿ ಸೇರಿದಂತೆ 262 ಪದವಿಪೂರ್ವ ಕಾಲೇಜುಗಳಿವೆ.

ADVERTISEMENT

ಅಧ್ಯಯನ ಸಾಮಗ್ರಿ:

‘ಜಿಲ್ಲೆಯನ್ನು 10ನೇ ಸ್ಥಾನದೊಳಗೆ ತರುವ ಗುರಿಯನ್ನು ಹೊಂದಲಾಗಿದೆ. ವಿಷಯ ಉಪನ್ಯಾಸಕರ ವೇದಿಕೆಗಳು ನೂತನ ಪ್ರಶ್ನೆಪತ್ರಿಕೆಗೆ ಅನುಕೂಲವಾಗುವ ಅಧ್ಯಯನ ಸಾಮಗ್ರಿಗಳನ್ನು ಮಕ್ಕಳಿಗೆ ಒದಗಿಸಿವೆ. ಫಲಿತಾಂಶ ಸುಧಾರಣೆಗೆ ಪರೀಕ್ಷೆ, ವಿಶೇಷ ತರಗತಿ ನಡೆಸಲು ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ. ಉಪನ್ಯಾಸಕರು ಉತ್ಸಾಹದಿಂದ ಮಕ್ಕಳನ್ನು ತಯಾರಿಗೊಳಿಸುತ್ತಿದ್ದಾರೆ’ ಎಂದು ಡಿಡಿಪಿಯು ನಾಗಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ರಮಕ್ಕೆ ಅವಕಾಶವಿಲ್ಲ: ‘ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಸೂಪರಿಂಟೆಂಡೆಂಟ್ ಒಳಗೊಂಡಂತೆ ಐವರು ಸಿಬ್ಬಂದಿ ಇರಲಿದ್ದಾರೆ. ಪ್ರತಿ 30 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಹಾಗೂ ಮೇಲ್ವಿಚಾರಕರು ಇರಲಿದ್ದಾರೆ. ಪ್ರಶ್ನೆಪತ್ರಿಕೆಗಳು ಜಿಲ್ಲಾಧಿಕಾರಿ ನಿಗಾದಲ್ಲಿ ವಿತರಣೆಯಾಗಲಿದೆ. ಇಲಾಖೆಯಿಂದ ಪ್ರತಿ ತಾಲ್ಲೂಕಿನಲ್ಲೂ ಒಂದು ಹಾಗೂ ನಗರದಲ್ಲಿ ಮೂರು ಜಾಗೃತ ದಳ ಕಣ್ಗಾವಲು ನಡೆಸಲಿವೆ’ ಎಂದು ಮಾಹಿತಿ ನೀಡಿದರು.

2020ರಲ್ಲಿ ನಗರದ ವಿದ್ಯಾರ್ಥಿಗಳು ಶೇ 74.29ರಷ್ಟು ಹಾಗೂ ಗ್ರಾಮಾಂತರದಲ್ಲಿ ಶೇ 54.24 ಫಲಿತಾಂಶ ಪಡೆದಿದ್ದರೆ, 2022ರಲ್ಲಿ ನಗರ– ಶೇ 66.16, ಗ್ರಾಮಾಂತರ– ಶೇ 55.64 ಫಲಿತಾಂಶ ಬಂದಿದೆ. ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ನಗರಕ್ಕಿಂತ ಕಡಿಮೇ ಇದೆ. ಅಲ್ಲಿ ಫಲಿತಾಂಶ ವೃದ್ಧಿಗೆ ಇಲಾಖೆಯಿಂದ ಹೆಚ್ಚಿನ ಪರಿಣಾಮಕಾರಿಯಾದ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂಬ ಮಾತುಗಳಿವೆ.

ಪರಿಶಿಷ್ಟರ ಫಲಿತಾಂಶ ಕುಸಿತ:

2020ರ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶೇ 50.49, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ 54.13ರಷ್ಟು ಫಲಿತಾಂಶ ಗಳಿಸಿದ್ದರು. 2022ರಲ್ಲಿ ಪರಿಶಿಷ್ಟ ಜಾತಿ– ಶೇ 48.73, ಪ.ಪಂಗಡದವರು ಶೇ 54.10ರಷ್ಟು ಫಲಿತಾಂಶ ಪಡೆದಿದ್ದರು.

2020ರಲ್ಲಿ ಬಾಲಕರು ಶೇ 52.09ರಷ್ಟು, ಬಾಲಕಿಯರು ಶೇ 68.95ರಷ್ಟು ಫಲಿತಾಂಶ ಗಳಿಸಿದ್ದರು. 2022ರಲ್ಲಿ ಇದು ಕ್ರಮವಾಗಿ ಶೇ 50.36ರಷ್ಟು ಮತ್ತು ಶೇ 69.52ರಷ್ಟಿತ್ತು. ವರ್ಷದಿಂದ ವರ್ಷಕ್ಕೆ ಅಂತರ ಹೆಚ್ಚಾಗುತ್ತಲೇ ಇದೆ.

ನೂತನ ಪ್ರಶ್ನೆಪತ್ರಿಕೆ:

ಪ್ರಶ್ನೆಪತ್ರಿಕೆಯಲ್ಲಿ ತಲಾ ಒಂದು ಅಂಕದ ಪ್ರಶ್ನೆಗಳನ್ನು 20ಕ್ಕೆ ಹೆಚ್ಚಿಸಲಾಗಿದೆ (ಈ ಹಿಂದೆ 10 ಪ್ರಶ್ನೆಗಳು ಇರುತ್ತಿದ್ದವು). ಸುಲಭ ಪ್ರಶ್ನೆಗಳ ಪ್ರಮಾಣವನ್ನು ಶೇ 40ಕ್ಕೆ, ಮಧ್ಯಮ ಕ್ರಮಾಂಕದ ಪ್ರಶ್ನೆಗಳನ್ನು ಶೇ 40 ಮತ್ತು ಕಷ್ಟದ ಪ್ರಶ್ನೆಗಳನ್ನು ಶೇ 20ಕ್ಕೆ ಇಳಿಸಲಾಗಿದ್ದು, ಇದು ಸುಲಭವಾಗಿ ತೇರ್ಗಡೆಗೆ ಸಹಕಾರಿಯಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ವಿಜ್ಞಾನ ವಿದ್ಯಾರ್ಥಿಗಳೇ ಹೆಚ್ಚು: ಈ ಬಾರಿ ಕಲಾ ವಿಭಾಗದಲ್ಲಿ 8,148, ವಿಜ್ಞಾನದಲ್ಲಿ 11,561 ಹಾಗೂ ವಾಣಿಜ್ಯ ವಿಭಾಗದಲ್ಲಿ 10,707 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿರುವುದು 3 ವರ್ಷಗಳಲ್ಲಿ ಇದೇ ಮೊದಲು. ಹಿಂದಿನ ಫಲಿತಾಂಶವನ್ನು ಗಮನಿಸಿದರೆ, ವಿಜ್ಞಾನ ವಿಭಾಗವು ಫಲಿತಾಂಶದಲ್ಲಿ ಇತರ ವಿಭಾಗಗಳಿಗಿಂತಲೂ ಮುಂದಿದೆ.

ಸಿದ್ಧತೆ

ಪಿಯು ಪರೀಕ್ಷೆಗೆ ನಗರದಲ್ಲಿ 26 ಹಾಗೂ ಗ್ರಾಮೀಣ ಭಾಗದಲ್ಲಿ 24 ಕೇಂದ್ರಗಳನ್ನು ಸಿದ್ಧಗೊಳಿಸಲಾಗಿದೆ. ಪರೀಕ್ಷೆಗೆ 30,416 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

–ನಾಗಮಲ್ಲೇಶ್‌, ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.