ಮೈಸೂರು: ನಗರದ ಪ್ರಮುಖ ಸ್ಥಳಗಳಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟಿಸಿದವು. ಬುಧವಾರ ಬೆಳಿಗ್ಗಿನಿಂದ ರಾತ್ರಿಯವರೆಗೂ ಪ್ರತಿಭಟನೆಯ ಕೂಗು ಮಾರ್ದನಿಸಿತು.
ಜಿಲ್ಲೆಯ ‘ಧರ್ಮಸ್ಥಳ ಕ್ಷೇತ್ರದ ಭಕ್ತಾಭಿಮಾನಿಗಳ ವೇದಿಕೆ’ಯು ‘ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಸಿದ್ಧಾರ್ಥನಗರದ ಹಳೆ ಹಾಲಿನ ಡೇರಿ ಮುಂಭಾಗ ಜಮಾಯಿಸಿದ ನೂರಾರು ಪ್ರತಿಭಟನಕಾರರು, ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ಧರ್ಮವನ್ನು ಉಳಿಸಿ’, ‘ಶ್ರೀ ಕ್ಷೇತ್ರಕ್ಕೆ ಜಯವಾಗಲಿ’, ‘ನಾವು ಕ್ಷೇತ್ರದ ಭಕ್ತರು ಅದರ ಉಳಿವಿಗಾಗಿ ನೆತ್ತರು ಚೆಲ್ಲಲು ತಯಾರಿದ್ದೇವೆ’, ‘ಮರುಗದಿರಿ ಪೂಜ್ಯರೇ ಮರುಗದಿರಿ ನಿಮ್ಮೊಂದಿಗೆ ನಾವಿದ್ದೇವೆ’, ‘ಕೈಯಲ್ಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ’, ‘ತನಿಖೆ ಪಾರದರ್ಶಕವಾಗಿರಲಿ, ಎಲ್ಲರೂ ಸಹಕರಿಸೋಣ’ ಇತ್ಯಾದಿ ಘೋಷಣೆ ಕೂಗಿದರು.
ವಕೀಲ ಶ್ಯಾಮ್ ಭಟ್ ಮಾತನಾಡಿ, ‘ಅನಾಮಿಕ ವ್ಯಕ್ತಿಯು ತೋರಿಸಿರುವ ಜಾಗಗಳಲ್ಲಿ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ತನಿಖೆಯು ಮುಕ್ತಾಯದ ಹಂತ ತಲುಪಿದೆ. ಸುಳ್ಳು ಆರೋಪ ಮಾಡಿ ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ನಷ್ಟವುಂಟು ಮಾಡಿದ ಆರೋಪದಲ್ಲಿ ಆತನ ವಿರುದ್ಧ ಕಾನೂನು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಎಚ್.ವಿ.ರಾಜೀವ್, ಕೋಟೆ ಶಿವಣ್ಣ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಬೆಂಬಲ ಸೂಚಿಸಿದರು.
ಮಾಜಿ ಮೇಯರ್ ಶಿವಕುಮಾರ್, ಸಂದೇಶ್ ಸ್ವಾಮಿ, ಸೋಮಣ್ಣ, ಬೈರಪ್ಪ, ವಿಕಾಸ್ ಶಾಸ್ತ್ರಿ, ಹಂದನಹಳ್ಳಿ ಸೋಮಶೇಖರ್, ಬಸವರಾಜು, ಪ್ರಭುಸ್ವಾಮಿ, ಹರೀಶ್ ಹೆಗ್ಗಡೆ, ಪ್ರೇಮ್ ಕುಮಾರ್ ಭಾಗವಹಿಸಿದ್ಧರು.
ಆಶಾ ಕಾರ್ಯಕರ್ತೆಯರಿಗೆ ಬೆಂಬಲ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆಯರು ಗಾಂಧಿ ವೃತ್ತದ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿಯು ಎರಡನೇ ದಿನಕ್ಕೆ ಕಾಲಿಟ್ಟಿತು.
ರೈತ ಸಂಘಟನೆಯ ಮುಖಂಡರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹೊಸಕೋಟೆ ಬಸವರಾಜ್ ಮಾತನಾಡಿ, ‘ಯಾವುದೇ ಸರ್ಕಾರಗಳು ಬಂದರೂ ದುಡಿಯುವ ವರ್ಗಕ್ಕೆ ಸಮಸ್ಯೆ ತಪ್ಪುತ್ತಿಲ್ಲ. ಹಕ್ಕನ್ನು ಪಡೆದುಕೊಳ್ಳಲು ನಿರಂತರ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ’ ಎಂದರು.
ಮಹಿಳಾ ಹೋರಾಟಗಾರ್ತಿ ರತಿರಾವ್, ಎಐಯುಟಿಯುಸಿಯ ರಾಜ್ಯ ಉಪಾಧ್ಯಕ್ಷೆ ಎಂ. ಉಮಾದೇವಿ, ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ, ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಎಂ. ಉಮಾದೇವಿ, ಎಐಎಂಎಸ್ಎಸ್ ಜಿಲ್ಲಾ ಅಧ್ಯಕ್ಷೆ ನಳಿನ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಸುಮಾ, ಮೈಸೂರು ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿ ಅಕ್ಕಮಹಾದೇವಿ, ಮೈಸೂರು ವಿ.ವಿ ಹಾಸ್ಟೆಲ್ ಕಾರ್ಮಿಕರ ಸಂಘದ ಹರೀಶ್, ಕೆಟಿಪಿಎಲ್ ಎಂಪ್ಲಾಯೀಸ್ ಯೂನಿಯನ್‌ನ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ, ರೈತ ಮುಖಂಡ ಮರಂಕಯ್ಯ ಮಾತನಾಡಿದರು.
ಭಾರತೀಯ ಬೌದ್ಧ ಮಹಾಸಭಾ: 1947ರ ಬಿ.ಟಿ ಕಾಯ್ದೆ ರದ್ದಾಗಬೇಕು ಎಂದು ಆಗ್ರಹಿಸಿ ಭಾರತೀಯ ಬೌದ್ಧ ಮಹಾಸಭಾ ಸದಸ್ಯರು ಪುರಭವನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟಿಸಿದರು.
‘ಬುದ್ಧಗಯಾದ ಮಹಾಬೋಧಿ ವಿಹಾರವು 1949ರ ನಂತರ ಅನ್ಯ ಧರ್ಮೀಯರ ಆಡಳಿತದಲ್ಲಿದೆ. ಬೌದ್ಧರೇ ಆಡಳಿತ ಮಂಡಳಿ ಸದಸ್ಯರಾಗಲು ಬಿ.ಟಿ ಕಾಯ್ದೆ ರದ್ದಾಗಬೇಕಿದೆ. ಇದಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಫೆ.12ರಿಂದ ಬೌದ್ಧ ಬಿಕ್ಕುಗಳು ಸತ್ಯಾಗ್ರಹ ಆರಂಭಿಸಿದ್ದು, ಪೊಲೀಸರು ದೌರ್ಜನ್ಯವೆಸಗಿದ್ದಾರೆ. ಇದನ್ನು ಸಂಘಟನೆ ಖಂಡಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಆಕಾಶ್ ಲಾಮ, ಚಂದ್ರಬೋಧಿ ಪಾಟೀಲ್, ಎಂ.ವೆಂಕಟಸ್ವಾಮಿ, ಶಂಕರ ರಾಮಲಿಂಗಯ್ಯ, ಶಂಭುಲಿಂಗಯ್ಯ, ಭಂಗವಾದಿ ನಾರಾಯಣಪ್ಪ, ಮಂಜುನಾಥ್, ಮಾಜಿ ಮೇಯರ್ ಪುರುಷೋತ್ತಮ್ ಭಾಗವಹಿಸಿದ್ದರು.
‘ಕಾರ್ಪೊರೇಟ್ ಕಂಪೆನಿಗಳು ಭಾರತ ಬಿಟ್ಟು ತೊಲಗಲಿ’
ಮೈಸೂರು: ಸಂಯುಕ್ತ ಕಿಸಾನ್ ಮೋರ್ಚಾವು ಕ್ವಿಟ್ ಇಂಡಿಯಾ ಚಳವಳಿಯ ನೆನಪಿನಲ್ಲಿ ಕರೆ ನೀಡಿರುವ ಪ್ರತಿಭಟನೆ ಬೆಂಬಲಿಸಿ ಗಾಂಧಿ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಸದಸ್ಯರು ಪ್ರತಿಭಟಿಸಿದರು. ‘ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹಿಸಿದರು.
ಸಾಮ್ರಾಜ್ಯಶಾಹಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಹೇರಿಕೆ ಹಾಗೂ ದಂಡದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಕಾಪಾಡಬೇಕು’ ಎಂದು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮರಂಕಯ್ಯ ಹೊಸಕೋಟೆ ಬಸವರಾಜ್ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಜಯರಾಂ ಕಂದೇಗಾಲ ಶ್ರೀನಿವಾಸ್ ಚೌಡಳ್ಳಿ ಜವರಯ್ಯ ಗೌರಿಪುರ ಚಿಕ್ಕಣ್ಣೇಗೌಡ ದೇವರಾಜಮ್ಮ ಚಂದ್ರಶೇಖರ್ ಪುಟ್ಟರಾಜು ಉಗ್ರ ನರಸಿಂಹೇಗೌಡ ಸುಬ್ರಹ್ಮಣ್ಯ ರಾಜೇಂದ್ರ ಅಣ್ಣಪ್ಪ ಆನಂದೂರು ಪ್ರಭಾಕರ್ ಬಸಪ್ಪ ನಾಯಕ ಗಣೇಶ್ ಮುದ್ದುರಾಜ್ ಸಣ್ಣನಾಯ್ಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.