ADVERTISEMENT

ಮೈಸೂರು ವಿವಿ 105ನೇ ಘಟಿಕೋತ್ಸವ: 31,689 ಅಭ್ಯರ್ಥಿಗಳಿಗೆ ‘ಪದವಿ’ ನಾಳೆ

ಮೈಸೂರು ವಿಶ್ವವಿದ್ಯಾಲಯದ 105ನೇ ಘಟಿಕೋತ್ಸವ; ಈ ಬಾರಿಯೂ ಮಹಿಳೆಯರೇ ಮೇಲುಗೈ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 1:17 IST
Last Updated 17 ಜನವರಿ 2025, 1:17 IST
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಹಾಲ್‌
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಹಾಲ್‌   

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದ 105ನೇ ಘಟಿಕೋತ್ಸವ ಇದೇ 18ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಕ್ರಾಫರ್ಡ್‌ ಭವನದಲ್ಲಿ ನಡೆಯಲಿದ್ದು, ಒಟ್ಟು 31,689 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ತಿಳಿಸಿದರು.

‘ಈ ಬಾರಿಯೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಶೇ 63.18ರಷ್ಟು ಅಂದರೆ 20,022 ಮಂದಿ ಹಾಗೂ ಶೇ 36.81ರಷ್ಟು ಪುರುಷ (11,667) ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. 140 ಮಹಿಳೆಯರು ಮತ್ತು 164 ಪುರುಷರು ಸೇರಿ ಒಟ್ಟು 304 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಲಾ, ವಾಣಿಜ್ಯ, ಶಿಕ್ಷಣ, ಕಾನೂನು, ವಿಜ್ಞಾನ ಹಾಗೂ ತಂತ್ರಜ್ಞಾನ ನಿಕಾಯಗಳಲ್ಲಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದರು.

ADVERTISEMENT

413 ಪದಕ: ‘216 ಅಭ್ಯರ್ಥಿಗಳು ಒಟ್ಟು 413 ಚಿನ್ನದ ಪದಕಗಳು ಹಾಗೂ 208 ಬಹುಮಾನಗಳನ್ನು ಪಡೆದಿದ್ದಾರೆ. ಅವರಲ್ಲಿ 139 ಮಹಿಳೆಯರು. 4,074 (ಶೇ 64.66) ಮಹಿಳೆಯರು ಸೇರಿದಂತೆ 6,300 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, 15,808 (ಶೇ 63.01) ಮಹಿಳೆಯರು ಸೇರಿದಂತೆ ಒಟ್ಟು 25,085 ಮಂದಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.

ಉನ್ನತ ಶಿಕ್ಷಣ ಮಹತ್ವದ್ದಾಗಿದ್ದು ಸರ್ಕಾರ ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
ಪ್ರೊ.ಎನ್.ಕೆ. ಲೋಕನಾಥ್‌, ಕುಲಪತಿ ,ಮೈಸೂರು ವಿಶ್ವವಿದ್ಯಾಲಯ

‘ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಕೆಮಿಸ್ಟ್ರಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಎಂ.ಆರ್. ಭೂಮಿಕಾ ಅತಿ ಹೆಚ್ಚು ಅಂದರೆ 18 ಚಿನ್ನದ ಪದಕ ಹಾಗೂ 4 ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಸಾಧನೆ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಸಿ.ಕಾವ್ಯಾ (ಎಂ.ಎ. ಕನ್ನಡ) ಇದ್ದು, ಅವರು 11 ಪದಕ ಹಾಗೂ 5 ನಗದು ಬಹುಮಾನ ಗಳಿಸಿದ್ದಾರೆ. ಬಿ.ಎ. ಪದವಿಯಲ್ಲಿ ಪಿ.ಕೆ. ಸಂಗೀತಾ 5 ‍ಪದಕ, 7 ನಗದು ಬಹುಮಾನ, ಬಿಕಾಂನಲ್ಲಿ ಕೆ.ಖುಷಿ 3 ಚಿನ್ನದ ಪದಕ, 2 ನಗದು ಬಹುಮಾನ, ಎಂ.ಕಾಂ.ನಲ್ಲಿ 4 ಪದಕ, 1 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಬಿ.ಇಡಿ.ಯಲ್ಲಿ ಎಸ್.ಕೀರ್ತನಾ ತಲಾ 2 ಪದಕ ಹಾಗೂ 2 ನಗದು, ಎಂ.ಇಡಿ.ಯಲ್ಲಿ ಎನ್.ಹರ್ಷಿತಾ 5 ಪದಕ ಮತ್ತು 2 ನಗದು ಬಹುಮಾನ ಗಳಿಸಿದ್ದಾರೆ’ ಎಂದು ತಿಳಿಸಿದರು.

ಎಲ್‌ಎಲ್ಎಂನಲ್ಲಿ ದೇವಾನಂದ ಸಾಧನೆ: ‘ಬಿಎ ಎಲ್‌ಎಲ್‌ಬಿಯಲ್ಲಿ ಪ್ರತೀಕ್ಷಾ ಪಾವಸ್ಕರ್‌ 1 ಪದಕ, ಎಲ್‌ಎಲ್ಎಂನಲ್ಲಿ ಆರ್.ದೇವಾನಂದ ತಲಾ 3 ಪದಕ, 3 ನಗದು ಬಹುಮಾನ, ಬಿಎಸ್ಸಿಯಲ್ಲಿ ಬಿ.ವಿ.ವಿನಯ್‌ 6 ಪದಕ, 5 ನಗದು ಬಹುಮಾನ, ಎಂ.ಎಸ್. ದೀಪಿಕಾ ಗೌಡ 4 ಪದಕ, 7 ನಗದು ಬಹುಮಾನ, ಎಂಎಸ್‌ಸಿ (ಬಾಟನಿ)ಯಲ್ಲಿ ವಿವಿನಾ ಸ್ವೀಡಲ್‌ ಥೋರಸ್ 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕಾಯಂ ಹುದ್ದೆ ಶೇ 76ರಷ್ಟು ಖಾಲಿ’

‘ವಿಶ್ವವಿದ್ಯಾಲಯಕ್ಕೆ 686 ಕಾಯಂ ಬೋಧಕರ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ ಸದ್ಯ 400ಕ್ಕೂ ಹೆಚ್ಚು ಹುದ್ದೆಗಳು ಅಂದರೆ ಶೇ 76ರಷ್ಟು ಖಾಲಿ ಇವೆ. ಭರ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಆರ್ಥಿಕ ಇಲಾಖೆಯ ಹಂತದಲ್ಲಿದೆ. ತುರ್ತಾಗಿ 70 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಕೋರಲಾಗಿದೆ. ಅತಿಥಿ ಉಪನ್ಯಾಸಕರ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಅವರು ಸದ್ಯ 800 ಮಂದಿ ಇದ್ದಾರೆ’ ಎಂದು ಪ್ರೊ.ಎನ್.ಕೆ. ಲೋಕನಾಥ್‌ ತಿಳಿಸಿದರು.

‘ಈಗ ನಮ್ಮ ವಿವಿಯು ಮೈಸೂರಿಗೆ ಮಾತ್ರವೇ ಸೀಮಿತವಾಗಿದೆ. ಆದರೆ ಇನ್ನೆರಡು ವರ್ಷ ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳು ನಮ್ಮ ಘಟಿಕೋತ್ಸವದಲ್ಲಿ ಪದವಿ ಪಡೆದುಕೊಳ್ಳಲಿದ್ದಾರೆ. ನಂತರ ನಮ್ಮ ಜಿಲ್ಲೆಯವರು ಮಾತ್ರವೇ ಉಳಿದುಕೊಳ್ಳುತ್ತಾರೆ. ಸದ್ಯ ಯಾವುದೇ ವಿಭಾಗವೂ ಮುಚ್ಚದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.