ADVERTISEMENT

ಅಭಿಷೇಕದಲ್ಲಿ ಮಿಂದೆದ್ದ ನಂದಿ

ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 14ನೇ ವರ್ಷದ ವೈಭವದ ಮಹಾಭಿಷೇಕ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 11:31 IST
Last Updated 17 ನವೆಂಬರ್ 2019, 11:31 IST
ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 14ನೇ ವರ್ಷದ ಮಹಾಭಿಷೇಕ ಮಾಡಲಾಯಿತು
ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 14ನೇ ವರ್ಷದ ಮಹಾಭಿಷೇಕ ಮಾಡಲಾಯಿತು   

ಮೈಸೂರು: ಚಾಮುಂಡಿಬೆಟ್ಟದ ಪುರಾತನ ನಂದಿ ವಿಗ್ರಹಕ್ಕೆ ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 14ನೇ ವರ್ಷದ ಮಹಾಭಿಷೇಕ ಭಾನುವಾರ ವೈಭವದಿಂದ ನೆರವೇರಿತು.

ಹೊಸ ಮಠದ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಒಟ್ಟು 34 ಬಗೆಯ ದ್ರವ್ಯಗಳು ಸೇರಿದಂತೆ ವಿವಿಧ ಫಲ, ಪುಷ್ಪಗಳಿಂದ ನಂದಿಗೆ ವೇದಘೋಷಗಳ ನಡುವೆ ಅಭಿಷೇಕ ಮಾಡಿದರು.

ಈಚೆಗಷ್ಟೇ ಶುಚಿಗೊಂಡು ಬೆಳ್ಳಗಾಗಿರುವ ನಂದಿ ವಿಗ್ರಹವು ಅಭಿಷೇಕದಿಂದ ವಿವಿಧ ವರ್ಣಗಳಿಂದ ಶೋಭಿಸಿತು. ಹಾಲು, ಮೊಸರು ಹಾಗೂ ಭಸ್ಮಗಳಿಂದ ಮಾಡಿದ ಅಭಿಷೇಕವು ಶ್ವೇತವರ್ಣದಿಂದ ಮಿಂಚಿದರೆ, ಅರಿಸಿನ, ಚಂದನದ ಅಭಿಷೇಕದಿಂದ ವಿಗ್ರಹ ಹಳದಿ ಬಣ್ಣಕ್ಕೆ ತಿರುಗಿತು. ಕುಂಕುಮದ ಅಭಿಷೇಕದಲ್ಲಿ ವಿಗ್ರಹ ಕೆಂಪು ಬಣ್ಣಕ್ಕೆ ಬದಲಾಗಿ ಭಕ್ತರ ಮನಸಿನಲ್ಲಿ ಅಚ್ಚು ಮೂಡಿಸಿತು.

ADVERTISEMENT

ಎಳನೀರು, ಜೇನುತುಪ್ಪ, ಕಬ್ಬಿನ ಹಾಲು, ದ್ರಾಕ್ಷಾರಸ, ಪಂಚಾಮೃತ, ಬಾಳೆಹಣ್ಣು, ಸೌತೆಕಾಯಿ ಅಭಿಷೇಕದ ನಂತರ ಸುವರ್ಣದ ಅಭಿಷೇಕವಾಗಿ ನಾಣ್ಯಗಳನ್ನು ಬಕೆಟುಗಟ್ಟಲೆ ನಂದಿಗೆ ಅಭಿಷೇಕ ಮಾಡಲಾಯಿತು. ಭಕ್ತರು ಧನರಾಶಿಯನ್ನು ಕಂಡು ಪುಳಕಿತರಾದರು.

ನಂದಿಯ ಹಿಂಭಾಗಕ್ಕೆ ಹೊಂದಿಕೊಂಡಂತೆ ಎತ್ತರದ ಮರದ ಅಟ್ಟಣಿಕೆಯನ್ನು ನಿರ್ಮಿಸಲಾಗಿತ್ತು. ಕಬ್ಬಿಣದ ಮೆಟ್ಟಿಲುಗಳು ಸುರಕ್ಷಿತವಾಗಿದ್ದವು. ಸ್ವಾಮೀಜಿಗಳು ಅಟ್ಟದ ಮೇಲೆ ನಿಂತು ಸ್ವಯಂ ಸೇವಕರು ನೀಡುತ್ತಿದ್ದ ಬಕೀಟುಗಳನ್ನು ಪಡೆದುಕೊಂಡು ನಂದಿಗೆ ಅಭಿಷೇಕ ಮಾಡುತ್ತಿದ್ದರು.

ಭಕ್ತರ ಪಾಲಿಗೆ ಅದ್ಭುತ: ಮೆಟ್ಟಿಲು ಹತ್ತುವ ಭಕ್ತರಿಗೆ ಅಕ್ಷರಶಃ ಇದು ಹಬ್ಬವಾಗಿತ್ತು. ವಾಹನ ನಿಲುಗಡೆಗೂ ಅವಕಾಶ ಮಾಡಿಕೊಡಲಾಗಿತ್ತು. ಬೆಟ್ಟದ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ನಂದಿ ಮಾರ್ಗದಲ್ಲಿ ರಸ್ತೆ ಕುಸಿದಿದ್ದ ಕಾರಣ, ಉತ್ತನಹಳ್ಳಿ ಕಡೆಯಿಂದ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳಲ್ಲಿ ಬಂದ ರಾಜ್ಯ, ಹೊರ ರಾಜ್ಯಗಳ ಭಕ್ತರು ಅಭಿಷೇಕವನ್ನು ವೀಕ್ಷಿಸಿ ಧನ್ಯರಾದರು.

ಬೆಟ್ಟದ ಬಳಗದ ಅಧ್ಯಕ್ಷ ಎಸ್.ಪ್ರಕಾಶ್, ಕಾರ್ಯದರ್ಶಿ ಎನ್.ಗೋವಿಂದ, ಖಜಾಂಚಿ ಎನ್.ಸುರೇಶ್‌, ಟ್ರಸ್ಟಿಗಳಾದ ಶಂಕರ್‌, ಸುಂದರ್, ಸುಬ್ಬಣ್ಣ, ಬಸವರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.