ADVERTISEMENT

ನಂಜನಗೂಡಿನಲ್ಲಿ ಅದ್ದೂರಿ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ

ನಂಜುಂಡನ ತೇರಿಗೆ ಹರಿದು ಬಂದ ಭಕ್ತಸಾಗರ

ಮೋಹನ್ ಕುಮಾರ ಸಿ.
Published 9 ಏಪ್ರಿಲ್ 2025, 4:24 IST
Last Updated 9 ಏಪ್ರಿಲ್ 2025, 4:24 IST
<div class="paragraphs"><p>ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ</p></div>

ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ

   

ನಂಜನಗೂಡು (ಮೈಸೂರು ಜಿಲ್ಲೆ): ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ 'ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ' ಬುಧವಾರ ಬೆಳಿಗ್ಗೆ 6ಕ್ಕೆ ಇಲ್ಲಿ ಅದ್ದೂರಿಯಾಗಿ ನೆರವೇರಿತು‌.

ದಕ್ಷಿಣ ಕಾಶಿ ನಂಜನಗೂಡು ದೊಡ್ಡಜಾತ್ರೆಯ ವೈಭವಕ್ಕೆ ಕಳಶಪ್ರಾಯವಾದ ನಂಜುಂಡನ ತೇರು ರಾಜಠೀವಿಯಲ್ಲಿ ಸಾಗುತ್ತಿದ್ದರೆ, ಭಕ್ತರ ಭಕುತಿಯನ್ನು ನೋಡಿದವರ ಎದೆಯಲ್ಲಿ ಬೆರಗು ತಂದಿತು. ಕಣ್ಣುಗಳಲ್ಲಿ ಭಕ್ತಿರಸ ತುಂಬಿ ಬಂದಿತು.

ADVERTISEMENT

ಇರುವೆಗಳಂತೆ ದೇಗುಲದ ಅಂಗಳವನ್ನು ತುಂಬಿದ್ದ ಜನರು ರಥ‌ದ ದಾರಿಯನ್ನೇ ಅನುಸರಿಸಿದರು. ರಥ ಬೀದಿಯಲ್ಲಿ ತೇರಿನ ಹೆಬ್ಬಾವಿನ ಗಾತ್ರದ ಮಿಣಿಯನ್ನು ಎಳೆದು ಹರಕೆ ತೀರಿಸಿದರು.

'ಬಂದನಾಪ್ಪ ಬಂದಾನೊ‌... ನಂಜುಂಡಪ್ಪ ಬಂದಾನೋ' ಎನ್ನುತ್ತ ದೊಡ್ಡರಥವನ್ನು ಎಳೆಯುತ್ತಿದ್ದರೆ, ಭಕ್ತಸಾಗರ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿತು. 'ಚಾಮುಂಡೇಶ್ವರಿ'ಗೂ ಜಯಕಾರ ಹಾಕಿತು.

ರಥಾರೋಹಣ: ಬೆಳಿಗ್ಗೆ 5.40 ಗಂಟೆಗೆ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಶ್ರೀಮನ್ನಹಾಗೌತಮ ರಥಾರೋಹಣ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಮುಂಭಾಗಕ್ಕೆ ತಂದ ನಂತರ ಗೌತಮ ರಥಕ್ಕೆ ದೇವರನ್ನು ಪ್ರತಿಷ್ಠಾಪಿಸಲಾಯಿತು.

ಆಗಮಿಕ ನಾಗಚಂದ್ರ ದೀಕ್ಷಿತ್ ಪೂಜೆ ಸಲ್ಲಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಅವರು ರಥದ ಚಕ್ರಕ್ಕೆ ಈಡುಗಾಯಿ ಒಡೆದು, ಹಸಿರು ಬಾವುಟ ತೋರಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಜೊತೆಯಲ್ಲಿದ್ದರು. ನಗಾರಿಯ 'ಧಿಮಿಧಿಮಿ'ಸುವ ಸದ್ದು ಮೇಳೈಸಿತು.‌ ಬೆಳಿಗ್ಗೆ 6ಕ್ಕೆ ರಥವು ಚಲಿಸಿತು.

ಶ್ರೀಕಂಠೇಶ್ವರಸ್ವಾಮಿಯ 110 ಟನ್‌ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು 1.5 ಕಿ.ಮೀ.ಯ ರಥಬೀದಿಯಲ್ಲಿ ಸಾಗಿದವು.

5 ರಥಗಳನ್ನು ವಿವಿಧ ಬಣ್ಣದ ವಸ್ತ್ರ, ಬಾವುಟಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿತ್ತು. ದೊಡ್ಡರಥವನ್ನು ಎಳೆಯಲು 100 ಮೀಟರ್‌ ಉದ್ದದ ಎರಡು ಬೃಹತ್ ಹಗ್ಗಗಳನ್ನು ಹೊತ್ತ ಭಕ್ತರು ಮೈಕಿನಲ್ಲಿ ಬರುತ್ತಿದ್ದ ಸೂಚನೆಗಳಿಗೆ ಕಿವಿಯಾಗಿದ್ದರು. ಹಸಿರು ಬಾವುಟ ಬೀಸಿದರೆ ಬಲಹಾಕಿ ಎಳೆಯುತ್ತಾ, ಕೆಂಬಾವುಟ ಬಂದರೆ ನಿಲ್ಲುತ್ತಾ 'ಭಕ್ತಿ ಸೇವೆ' ಸಲ್ಲಿಸಿದರು.

ರಥದ ಚಲನೆಯನ್ನು ನಿಯಂತ್ರಿಸಲು ಗೊದಮ ಕೊಡುವ ತಂಡದ ಸದಸ್ಯರು ಹೊಸ ಸಮವಸ್ತ್ರ ಧರಿಸಿದ್ದರು. ಜೊತೆಯಲ್ಲಿಯೇ ರಥವನ್ನು ನಿಯಂತ್ರಿಸಲು ಜೆಸಿಬಿ, ಕ್ರೇನ್, ಆಂಬುಲೆನ್ಸ್ ವಾಹನಗಳೂ ಇದ್ದವು.

ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ನಡೆಯಿತು. ಮಠಗಳು, ಸಂಘ- ಸಂಸ್ಥೆಗಳೂ ಪ್ರಸಾದ ನೀಡಿದವು.

ಹಾರಾಡಿದ ಕನ್ನಡ‌ ಬಾವುಟ: ಪುನೀತ್ ರಾಜ್ ಕುಮಾರ್ ಭಾವಚಿತ್ರವಿದ್ದ ಕನ್ನಡ ಬಾವುಟ, ಆರ್‌ಸಿಬಿ‌ ತಂಡದ ಬಾವುಟಗಳು ಹಾರಾಡಿದವು. 'ನಂಜುಂಡಪ್ಪ ನಂಜುಂಡಪ್ಪ ಈ ಸಲನಾದ್ರೂ ಕಪ್ ಕೊಡ್ಸಪ್ಪ' ಎಂದು ಬಾವುಟ ಬೀಸುತ್ತಿದ್ದ ಯುವಕರು ಕೂಗಿದರು. ಹಣ್ಣು ಜವನದಲ್ಲಿ 'ಆರ್ ಸಿಬಿಗೆ ಕಪ್ ಸಿಗಲಿ' ಎಂದು ಬರೆದು ರಥಕ್ಕೆ ಎಸೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.