ADVERTISEMENT

ಜುಬಿಲೆಂಟ್ ಕಾರ್ಖಾನೆ ಮಾಲೀಕ ವರ್ಗದ ಭಿಕ್ಷೆಗೆ ಮಣಿದ ಸರ್ಕಾರ: ಧ್ರುವನಾರಾಯಣ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2020, 8:06 IST
Last Updated 19 ಮೇ 2020, 8:06 IST
ಧ್ರುವನಾರಾಯಣ
ಧ್ರುವನಾರಾಯಣ   

ಮೈಸೂರು: ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯ ಮಾಲೀಕ ವರ್ಗದ ಭಿಕ್ಷೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಣಿದಿವೆ. ಕಾರ್ಖಾನೆಯಿಂದ ಕೊರೊನಾ ಸೋಂಕು ಹರಡಿದ ಸಂಗತಿ ಬಯಲಿಗೆ ಬಾರದಿರುವ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಧ್ರುವನಾರಾಯಣ ಆರೋಪಿಸಿದರು.

ಇದೇ ಕಾರ್ಖಾನೆಯ 70ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಇಲ್ಲಿಗೆ ವಿದೇಶಿ ವ್ಯಕ್ತಿಗಳು ಬಂದ ಕುರಿತು ಸಚಿವರಾದ ಸುರೇಶ್‌ಕುಮಾರ್, ಸುಧಾಕರ್, ಸೋಮಣ್ಣ ಈ ಹಿಂದೆಯೇ ಹೇಳಿದ್ದರು. ಸ್ಥಳೀಯ ಶಾಸಕ ಹರ್ಷವರ್ಧನ್ ಸಹ ದೆಹಲಿಯಿಂದ ಪ್ರಭಾವ ಬೀರಲಾಗಿದೆ ಎಂದು ತಿಳಿಸಿದ್ದರು. ಹೀಗಾಗಿ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾರ್ಖಾನೆಯವರು ನೀಡಿದ 50 ಸಾವಿರ ದಿನಸಿ ಕಿಟ್‌ಗಳು ಹಾಗೂ 10 ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಆಮಿಷಕ್ಕೆ ಸರ್ಕಾರ ತಲೆ ಬಾಗಿದೆ. ಇದೂ ಸಹ ಒಂದು ರೀತಿಯಲ್ಲಿ ಭ್ರಷ್ಟಾಚಾರವೇ ಆಗಿದೆ ಎಂದು ಹೇಳಿದರು.

ADVERTISEMENT

ಮಾಲೀಕ ವರ್ಗದಲ್ಲಿ ಒಬ್ಬರು ಈ ಹಿಂದೆ ಕಾಂಗ್ರೆಸ್‌ನಿಂದ ಹಾಗೂ ಈಗ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಹಲವು ಹತ್ತು ಉದ್ದಿಮೆಗಳ ಮಾಲೀಕರು ಅವರಾಗಿದ್ದಾರೆ. ಇದರಿಂದಾಗಿಯೇ ಸರ್ಕಾರ ಸುಮ್ಮನಿದೆ ಎಂದು ಕಿಡಿಕಾರಿದರು.

ಒಂದೆಡೆ ದೆಹಲಿಯಲ್ಲಿ ತಬ್ಲಿಗಿಸಂಘಟನೆಯ ವಿರುದ್ಧ ಕೊರೊನಾ ಸೋಂಕು ಹರಡಿದ ಸಂಬಂಧ ಪ್ರಕರಣ ದಾಖಲಿಸಲಾಗುತ್ತದೆ. ಇಲ್ಲಿ ಕಾರ್ಖಾನೆಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಇದು ಸರ್ಕಾರದ ಇಬ್ಬಗೆ ನೀತಿಗೆ ಸಾಕ್ಷಿ ಎಂದು ಚಾಟಿ ಬೀಸಿದರು.

‘ಕಾರ್ಖಾನೆಯ ಪುನರ್‌ ಆರಂಭಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಸೋಂಕು ಹರಡಿದ್ದು ಹೇಗೆ ಎಂಬುದರ ಸತ್ಯ ಜನರಿಗೆ ಗೊತ್ತಾಗಬೇಕು. ಹಾಗಾಗಿ, ಸಿಬಿಐ ತನಿಖೆಗೆ ಒತ್ತಾಯಿಸಲಾಗುತ್ತಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.