ADVERTISEMENT

ಸಬ್‌ ರಿಜಿಸ್ಟ್ರಾರ್‌ ಕಚೇರಿ ಸ್ಥಗಿತ; ಸೇವೆಗಳನ್ನು ಪಡೆಯಲಾಗದೇ ಪರದಾಡಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 15:12 IST
Last Updated 22 ಏಪ್ರಿಲ್ 2019, 15:12 IST

ಮೈಸೂರು: ಕಾಗದ ಹಾಗೂ ಇಂಕ್‌ ಕಾಟ್ರಿಜ್ ಖಾಲಿಯಾಗಿದ್ದ ಕಾರಣ ನಗರದ ಉಪ ನೋಂದಣಾಧಿಕಾರಿ ಕಚೇರಿಗಳ 15 ಶಾಖೆಗಳಲ್ಲಿ ಯಾವುದೇ ಕಾರ್ಯಗಳು ನಡೆಯದೇ ನಾಗರಿಕರು ಪರದಾಡುವಂತಾಯಿತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸೇರಿದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಈ ತಿಂಗಳಲ್ಲಿ ಎರಡು ಬಾರಿಗೆ ಈ ರೀತಿಯ ಸಮಸ್ಯೆ ಎದುರಾಗಿದೆ. ದಕ್ಷಿಣ ವಲಯ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಏ. 1ರಂದು ಸರ್ವರ್‌ ಡೌನ್ ಆಗಿದ್ದ ಕಾರಣಕ್ಕೆ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು. ಪುಣೆಯಲ್ಲಿರುವ ಸರ್ವರ್‌ಗೆ ಕಡತವೊಂದು ಲಭ್ಯವಾಗಿರದಿದ್ದ ಕಾರಣಕ್ಕೆ ಸರ್ವರ್‌ ಸ್ಥಗಿತಗೊಂಡಿತ್ತು.

ಆದರೆ, ಸೋಮವಾರ ಉತ್ತರ ಹಾಗೂ ದಕ್ಷಿಣ ವಲಯಗಳಿಗೆ ಸೇರಿದ ಒಟ್ಟು 15 ಕಚೇರಿಗಳಲ್ಲಿ ಕೆಲಸ ಸ್ಥಗಿತಗೊಂಡಿತ್ತು. ಈ ಬಾರಿ ಇದು ಸರ್ವರ್‌ಗೆ ಸಂಬಂಧಿಸಿದ ಸಮಸ್ಯೆಯಲ್ಲ. ಕಚೇರಿಗಳಲ್ಲಿದ್ದ ಕಾಗದ ಹಾಗೂ ಮುದ್ರಣಕ್ಕೆ ಅಗತ್ಯವಿರುವ ಇಂಕ್‌ ಮುಗಿದು ಹೋಗಿದ್ದು ಕೆಲಸ ನಿಲ್ಲಲು ಕಾರಣವಾಯಿತು.

ADVERTISEMENT

ಇದರಿಂದಾಗಿ ಎರಡೂ ವಲಯಗಳ ವ್ಯಾಪ್ತಿಗೆ ಒಳಪಡುವ ನಾಗರಿಕರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೇ ಹಿಂತಿರುಗುವಂತೆ ಆಯಿತು. ಬೆಳಿಗ್ಗೆ 10ರಿಂದ ಸಂಜೆ 4ರವರೆಗೂ ಯಾವ ಕೆಲಸಗಳೂ ಆಗಲಿಲ್ಲ. ಈ ಕಚೇರಿಗಳಿಗೆ ಕಾಗದ ಹಾಗೂ ಇಂಕ್‌ ಪೂರೈಸುವ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದಿದ್ದು ಇದಕ್ಕೆ ಕಾರಣ.

ನಾಗರಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಇನಾಂದಾರ್‌ ಅವರು ವಿಶೇಷ ಅನುಮತಿಯನ್ನು ಪಡೆದು ಕಾಗದ ಹಾಗೂ ಇಂಕ್‌ ಅನ್ನು ಪೂರೈಸಲು ವ್ಯವಸ್ಥೆ ಮಾಡಿದರು. ಹಾಗಾಗಿ, ಸಂಜೆ 4ರ ಬಳಿಕ ಕಾರ್ಯಗಳು ಆರಂಭವಾದವು. ಆದರೂ ಬಹುತೇಕ ಮಂದಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೇ ವಾಪಸಾದರು.

‘ಇದು ಕೇವಲ ಮೈಸೂರಿನ ಸಮಸ್ಯೆಯಲ್ಲ. ರಾಜ್ಯದ ಎಲ್ಲ ಭಾಗಗಳಲ್ಲೂ ಇದೇ ಸಮಸ್ಯೆ ಎದುರಾಗಿದೆ. ರಾಜ್ಯಮಟ್ಟದ ಗುತ್ತಿಗೆಯಾಗಿದ್ದ ಕಾರಣ ಲೇಖನ ಸಾಮಗ್ರಿಗಳನ್ನು ಒಟ್ಟಿಗೆ ಪೂರೈಸಲಾಗುತ್ತಿತ್ತು. ಗುತ್ತಿಗೆ ಅವಧಿ ಮಾರ್ಚ್‌ 31ಕ್ಕೆ ಮುಗಿದಿದೆ. ಈಗ ಕಚೇರಿ ಹಣದಿಂದಲೇ ಕೆಲಸ ನಡೆಯುತ್ತಿದೆ. ಜನತಾ ಬಜಾರ್‌ನಲ್ಲಿ ಸಾಲ ಪಡೆದು ಲೇಖನ ಸಾಮಗ್ರಿ ಪೂರೈಸಲಾಗಿದೆ ’ ಎಂದು ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.