ADVERTISEMENT

ಅನಧಿಕೃತ ಅಂಗಡಿ ತೆರವಿಗೆ ಸೂಚನೆ

ನಂಜನಗೂಡು ಅರಮನೆ ಮೈದಾನದಲ್ಲಿ ಸೋಮವಾರ ತಹಶೀಲ್ದಾರ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 1:54 IST
Last Updated 20 ಅಕ್ಟೋಬರ್ 2020, 1:54 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದರು
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದರು   

ನಂಜನಗೂಡು: ‘ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ಬುಧವಾರದ (ಅ.21) ಒಳಗೆ ತೆರವುಗೊಳಿಸಬೇಕು’ ಎಂದು ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್‌ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ನಗರಸಭೆ ಸಿಬ್ಬಂದಿ ಜೆಸಿಬಿಯೊಂದಿಗೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲುಸೋಮವಾರ ಸಿದ್ಧತೆ ನಡೆಸುತ್ತಿದ್ದಂತೆ ಅಂಗಡಿಗಳ ಮಾಲೀಕರು, ‘ಕಾಲಾವಕಾಶ ನೀಡಿದರೆ ನಾವೇ ತೆರೆವು ಮಾಡುತ್ತೇವೆ’ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಎರಡು ದಿನಗಳ ಗಡುವು ನೀಡಿದರು.

ತಹಶೀಲ್ದಾರ್ ಮಹೇಶ್ ಕುಮಾರ್ ಮಾತನಾಡಿ, ‘1993ರಲ್ಲಿ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಕಾರಣಾಂತರಗಳಿಂದ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಜಾಗದಲ್ಲಿ ದೇವಾಲಯಕ್ಕೆ ಸೇರಿರುವ ವಾಹನ ಮಂಟಪವಿದೆ. ಕಟ್ಟಡದಲ್ಲಿ ಮರದ ಕೆತ್ತನೆಯ ಆನೆ ಅಂಬಾರಿ, ಕುದುರೆ, ಬಸವನ ರಥ ಮುಂತಾದ ಅಮೂಲ್ಯ ಶಿಲ್ಪಗಳಿವೆ’ ಎಂದರು.

ADVERTISEMENT

‘ಕೆಲವು ವರ್ಷಗಳ ಹಿಂದೆ ಕಾರ್ತಿಕ ಮಾಸದಲ್ಲಿ ನಯನಜ ಕ್ಷತ್ರೀಯ ಸಮಾಜದವರು ಈ ಮೈದಾನದಲ್ಲಿ ಬಾಣ-ಬಿರುಸುಗಳ ಪ್ರದರ್ಶನ ನಡೆಸುತ್ತಿದ್ದರು. ಮೈದಾನವನ್ನು ದೇವಾಲಯದವರು ಬಳಸುವುದನ್ನು ನಿಲ್ಲಿಸಿದ ನಂತರ ಖಾಸಗಿಯವರು ಅನಧಿಕೃತವಾಗಿ ಅಂಗಡಿ ಇಟ್ಟುಕೊಂಡಿದ್ದಾರೆ. ಅವರಿಗೆ ತೆರವುಗೊಳಿಸಲು ಬುಧವಾರದವರೆಗೆ ಗಡುವು ನೀಡಲಾಗಿದೆ. ತೆರವಿಗೆ ಮುಂದಾಗದಿದ್ದರೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸುತ್ತೇವೆ, ಮಾಲೀಕರ ಮೇಲೆ ದೂರು ದಾಖಲಿಸಲಾಗುವುದು’ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ನಗರಸಭೆ ಆಯುಕ್ತ ಕರಿಬಸವಯ್ಯ, ಕಂದಾಯ ಅಧಿಕಾರಿಗಳಾದ ಪ್ರಕಾಶ್, ಲಕ್ಷ್ಮಣ್, ಪರಿಸರ ಅಧಿಕಾರಿ ಅರ್ಚನಾ, ಆರೋಗ್ಯಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.