ADVERTISEMENT

ಅರಮನೆಯಲ್ಲಿ ಹೊಸ ವರ್ಷಾಚರಣೆ ರದ್ದು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 13:57 IST
Last Updated 27 ಡಿಸೆಂಬರ್ 2024, 13:57 IST

ಪ್ರಜಾವಾಣಿ ವಾರ್ತೆ

ಮೈಸೂರು: ಅರಮನೆ ಮಂಡಳಿಯಿಂದ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.

‘ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಗೌರವಾರ್ಥ ರಾಜ್ಯದಾದ್ಯಂತ ಜ.1ರವರೆಗೆ ಶೋಕಾಚರಣೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರಣದಿಂದ ಅರಮನೆಯಲ್ಲಿ ಡಿ.28ರವರೆಗೆ ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆ ಇರುವುದಿಲ್ಲ. ಡಿ.31ರಂದು ರಾತ್ರಿ 11ರಿಂದ ಮಧ್ಯರಾತ್ರಿ 12ರವರೆಗೆ ಹಮ್ಮಿಕೊಂಡಿದ್ದ ಕರ್ನಾಟಕ ಮತ್ತು ಇಂಗ್ಲಿಷ್ ಬ್ಯಾಂಡ್ ಹಾಗೂ ಹೊಸ ವರ್ಷಾಚರಣೆ ಪ್ರಯುಕ್ತ ಶಬ್ದರಹಿತ ಹಸಿರು ಪಟಾಕಿಗಳನ್ನು ಸಿಡಿಸುವ ಕಾರ್ಯಕ್ರಮ ರದ್ದುಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಫಲಪುಷ್ಪ ಪ್ರದರ್ಶನವು ಡಿ.31ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿರುವ ಕಾರಣದಿಂದ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶ್ವಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಕ್ರಮವಾಗಿ ಡಿ.29 ಮತ್ತು ಜ.1ರಂದು ಕಲಾಮಂದಿರದ ಸುಚಿತ್ರಾ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.