ಪಿರಿಯಾಪಟ್ಟಣ: ನಿವೇಶನದ ದಾಖಲೆ ಪತ್ರಗಳು ಸರಿಯಾಗಿದ್ದರೂ ಖಾತೆದಾರರಿಗೆ ನಿವೇಶನ ಅಳತೆ ಚೆಕ್‌ಬಂದಿ ಹಾಕಿಕೊಡದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿ ಕೆ.ಯು. ಮುತ್ತಪ್ಪ ಅವರಿಗೆ ಕ್ರಮಕ್ಕೆ ಸೂಚನೆ ನೀಡಿದರು.
ತಾಲ್ಲೂಕಿನ ತಾ.ಪಂ. ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಹಳೆಪೇಟೆ ಕಂಠಪುರ ನಿವಾಸಿಗಳು ನೂರಾರು ವರ್ಷಗಳಿಂದಲೂ ಗ್ರಾಮಠಾಣಾ ಜಾಗದಲ್ಲಿ ವಾಸ ಮಾಡುತ್ತಾ ಬಂದಿದ್ದು, ಹಳೆಯ ದಾಖಲಾತಿಗಳು ಇದ್ದರೂ ಕೆಲವು ಮನೆಗಳು ಬಿದ್ದು ಹೋಗಿದ್ದು ನಿವೇಶನಗಳು ಹಾಗೂ ಮನೆಗಳನ್ನು ಅಳತೆ ಮಾಡಿ ಹಾಗೂ ಚೆಕ್ ಬಂದಿ ಹಾಕಿಕೊಡದೆ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಪಟ್ಟಣದಲ್ಲಿ ಎರಡು ಎಕರೆ ಜಮೀನು, ಮಾಲೀಕರಿಗೆ ತಿಳಿಯದಂತೆ ಬೇರೆ ಅವರ ಹೆಸರಿಗೆ ಪುರಸಭೆಯಲ್ಲಿ ಖಾತೆ ಮಾಡಿರುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕರಿಗೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮಾಲೀಕರಿಂದ ದೂರ ಕೊಡಿಸಬೇಕು ಎಂದು ಹೇಳಿದರು.
ರಾಗಿ ಖರೀದಿ ವೇರ್ ಹೌಸ್ ಮ್ಯಾನೇಜರ್ ಜಗದೀಶ್ ರಾಗಿ ಗುಣಮಟ್ಟ ಸರಿ ಇಲ್ಲ ಎಂದು ಹಿಂದಿರುಗಿಸುತ್ತಾರೆ, ಆದರೆ ಹಣಕೊಟ್ಟರೆ ತೆಗೆದು ಕೊಳ್ಳುತ್ತಾರೆ. ಇದರಿಂದ ರೈತರಿಗೆ ತುಂಬ ತೊಂದರೆ ಆಗಿದೆ ಎಂದು ರೈತರು ದೂರಿದರು. ರಾಗಿ ಖರೀದಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ ಅಧಿಕಾರಿಗಳು ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದು ಸೂಚನೆ ನೀಡಿದರು.
ವಿದ್ಯುತ್ ಇಲಾಖೆಯವರು ಸರಿಯಾಗಿ ಮೀಟರ್ ರೀಡಿಂಗ್ ಮಾಡದೆ ಆರು ತಿಂಗಳಿಗೆ ಒಮ್ಮೆ ಬಿಲ್ ನೀಡುತ್ತಿದ್ದು, ಗ್ರಾಹಕರಿಗೆ ಇದರಿಂದ ತೊಂದರೆಯಾಗಿದೆ. ಪ್ರತಿತಿಂಗಳು ಸರಿಯಾದ ರೀತಿ ವಿದ್ಯುತ್ ಬಿಲ್ ನೀಡಬೇಕೆಂದು ಮೀಟರ್ ರೀಡರ್‌ಗೆ ಸುಚಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ. ಜೆ. ಆನಂದ್ ಮನವಿ ಮಾಡಿದರು.
ಪೋಸ್ಟ್ ಆಫೀಸಲ್ಲಿ ಹಣ ವಿತರಣೆ ಮಾಡಲು ಒಂದೇ ಯಂತ್ರವಿದ್ದು ಅದನ್ನು ಮನೆ ಮನೆಗೆ ಹಣ ವಿತರಣೆ ಮಾಡಲು ತೆಗೆದುಕೊಂಡು ಹೋಗುತ್ತಾರೆ. ಆದರೆ ಪೋಸ್ಟ್ ಆಫೀಸ್ ನಲ್ಲಿ ಹಣ ಪಡೆಯಲು ಬರುವವರು ತೊಂದರೆ ಅನುಭವಿಸುತ್ತಿದ್ದಾರೆ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಕೆಲವರು ಮನವಿ ಮಾಡಿದರು.
ಜಮೀನು ದಾರಿಗೆ ಸಂಬಂಧಪಟ್ಟಂತೆ ಹಲವಾರು ದೂರುಗಳು ಕೇಳಿ ಬಂದ ಕಾರಣ ಸ್ಥಳದಲ್ಲಿದ್ದ ತಾ.ಪಂ. ಇಒ ಡಿ.ಬಿ. ಸುನೀಲ್ ಕುಮಾರ್ ಅವರಿಗೆ ತಕ್ಷಣ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ತೊಂದರೆ ಆಗದಂತೆ ನಿಗಾವಹಿಸಬೇಕೆಂದು ತಿಳಿಸಿದರು.
ಹಲವಾರು ಅರ್ಜಿಗಳು ಲೋಕಾಯುಕ್ತಕ್ಕೆ ದಾಖಲಾಯಿತು. ಲೋಕಾಯುಕ್ತ ವೃತ ನಿರೀಕ್ಷಕರಾದ ರೂಪಶ್ರೀ, ಉಮೇಶ್, ಸಿಬ್ಬಂದಿ ಶೇಖರ್, ತ್ರಿವೇಣಿ, ನೇತ್ರಾವತಿ ಅಧಿಕಾರಿಗಳಾದ ತಹಶೀಲ್ದಾರ್ ನಿಸರ್ಗ ಪ್ರಿಯ, ಎಇಇ ವೆಂಕಟೇಶ್, ಆರ್‌ಎಫ್‌ಒ ಪದ್ಮಶ್ರೀ , ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಪ್ರಸಾದ್, ಡಾ.ಸೋಮಯ್ಯ ಸಣ್ಣಸ್ವಾಮಿ, ಎಇಇ ಮಲ್ಲಿಕಾರ್ಜುನ, ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.