ಮೈಸೂರು: ‘ಭಾರತಕ್ಕೆ ಬಹುತ್ವವೇ ಜೀವಾಳ. ಭಾಷೆ, ಆಹಾರ, ಸಂಸ್ಕೃತಿಯ ವೈವಿಧ್ಯತೆ ಸಂಭ್ರಮಿಸಬೇಕೇ ಹೊರತು ಇಲ್ಲಿನ ಜಾತಿ ಪದ್ಧತಿಯನ್ನಲ್ಲ’ ಎಂದು ವಿಮರ್ಶಕ ಪ್ರೊ.ರಹಮತ್ ತರೀಕೆರೆ ಹೇಳಿದರು.
ನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರವು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಹುತ್ವದ ಭಾರತ’ ಕುರಿತು ಉಪನ್ಯಾಸ ನೀಡಿದರು.
‘ದೇಶದಲ್ಲಿರುವಷ್ಟು ಭಾಷೆ, ಆಹಾರ, ಉಡುಪು ವೈವಿಧ್ಯ ಬೇರೆಲ್ಲೂ ಇಲ್ಲ. ದಿನವೂ ರಾಗಿಮುದ್ದೆ ಮಾಡಿದರೆ, 365 ವೈವಿಧ್ಯದ ಸಾರುಗಳನ್ನು ಮಾಡುತ್ತಾರೆ’ ಎಂದು ಉದಾಹರಿಸಿದರು.
‘ವಾತಾವರಣಕ್ಕೆ ತಕ್ಕಂತೆ ವಿವಿಧ ಉಡುಪು, ಆಹಾರ, ಭಾಷೆ ಬೆಳೆದು ಬಂದಿದೆ. ರಾಜ್ಯಗಳ ಒಕ್ಕೂಟವಾಗಿರುವ ದೇಶದ ಭಿನ್ನ ಪರಂಪರೆಯ ಧಾರೆಗಳನ್ನು ಗೌರವಿಸಬೇಕು. ಒಂದು ಭಾಷೆ, ಧರ್ಮ, ಪಂಥವನ್ನು ಮತ್ತೊಂದರ ಮೇಲೆ ಹೇರಿಕೆ ಮಾಡಿದರೆ, ಬಹುತ್ವ ನಾಶವಾಗುತ್ತದೆ’ ಎಂದರು.
‘ಉತ್ತರ ಭಾರತದವರಿಗೆ ಎರಡು ಭಾಷೆ, ದಕ್ಷಿಣದ ರಾಜ್ಯಗಳಲ್ಲಿ ತ್ರಿಭಾಷೆ ಭಾಷೆ ಕಲಿಕೆಯ ಹೇರಿಕೆ ಮಾಡಲಾಗಿದೆ. ನೀವು ಯಾಕೆ ಎರಡು ಭಾಷೆ ಕಲಿಯುತ್ತಿದ್ದೀರಾ ಎಂದು ಉತ್ತರದವರನ್ನು ದಕ್ಷಿಣದವರು ಪ್ರಶ್ನೆ ಮಾಡಿದ್ದಾರಾ’ ಎಂದರು.
‘ದೇಶದ ಜಾತಿಗಳನ್ನು ಸಂಭ್ರಮಿಸಲು ಆಗದು. ತಾರತಮ್ಯ ಇದ್ದುದರಿಂದಲೇ ಅಂಬೇಡ್ಕರ್ ಜಾತಿ ವಿನಾಶಕ್ಕೆ ಕರೆ ನೀಡಿದ್ದರು. ಸಾಮಾಜಿಕ ಸಮಾನತೆಯನ್ನು ಸಾಧಿಸಬೇಕಿದೆ’ ಎಂದು ಹೇಳಿದರು.
ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪ್ರೊ.ನರೇಂದ್ರ ಕುಮಾರ್, ಕಾಲೇಜು ಪ್ರಾಂಶುಪಾಲರಾದ ಪ್ರೊ.ಸೌಮ್ಯಾ ಈರಪ್ಪ ಪಾಲ್ಗೊಂಡಿದ್ದರು.
ಭಾರತಕ್ಕೆ ಬಹುತ್ವವೇ ಜೀವಾಳ ಭಾಷೆ | ಸಂಸ್ಕೃತಿ ಹೇರಿಕೆ ಆಗಬಾರದು | ಉತ್ತರ ಭಾರತದಲ್ಲೇಕೆ ದ್ವಿಭಾಷಾ ನೀತಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.