ADVERTISEMENT

ಗಾಯಗೊಂಡಿದ್ದ ಪೊಲೀಸರ ಚೇತರಿಕೆ

ಪರಾರಿಯಾದವರಿಗಾಗಿ ಶೋಧ ಕಾರ್ಯಾಚರಣೆ ಚುರುಕು

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:33 IST
Last Updated 19 ಮೇ 2019, 10:33 IST

ಮೈಸೂರು: ರದ್ದಾದ ನೋಟುಗಳನ್ನು ಬದಲಾಯಿಸಿಕೊಡುತ್ತಿತ್ತು ಎನ್ನಲಾದ ಗುಂಪೊಂದರ ಮೇಲೆ ಪೊಲೀಸರು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪೊಲೀಸರು ಚೇತರಿಸಿಕೊಳ್ಳುತ್ತಿದ್ದಾರೆ.

ಗುಂಡಿನ ದಾಳಿಯಲ್ಲಿ ಸಾಯುವುದಕ್ಕೂ ಮುನ್ನ ಆರೋಪಿ ಸುಖವಿಂದರ್‌ಸಿಂಗ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ವಿಜಯನಗರ ಕಾನ್‌ಸ್ಟೆಬಲ್ ವೀರಭದ್ರ ಅವರ ಕುತ್ತಿಗೆಯನ್ನು ಬಲವಾಗಿ ಹಿಸುಕಿದ್ದ. ಈ ವೇಳೆಯೇ ಇನ್‌ಸ್ಪೆಕ್ಟರ್ ಕುಮಾರ್ ಆರೋಪಿ ಮೇಲೆ ಗುಂಡು ಹಾರಿಸಿದ್ದರು.

ಇದರಿಂದ ತೀವ್ರವಾಗಿ ಆಘಾತಕ್ಕೆ ಒಳಗಾಗಿದ್ದ ವೀರಭದ್ರ ಅವರು ಆಸ್ಪತ್ರೆಗೆ ಬಂದಾಗ ನಡುಗುತ್ತಲೇ ಇದ್ದರು. ಗುರುವಾರ ಇಡೀ ದಿನ ಅವರು ಆಘಾತದಿಂದ ಹೊರ ಬಂದಿರಲಿಲ್ಲ. ಕುತ್ತಿಗೆ ಬಳಿ ಗಾಯವಾಗಿ ಬಳಲಿದ್ದರು. ಸದ್ಯ, ಶುಕ್ರವಾರ ಅವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಆಘಾತದಿಂದ ಹೊರ ಬಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ADVERTISEMENT

ಎಎಸ್ಐ ವೆಂಕಟೇಶ್‌ ಅವರ ಮುಖದ ಮೇಲೆ ಆರೋಪಿ ಗುದ್ದಿರುವುದರಿಂದ ಕೆನ್ನೆಯ ಭಾಗದಲ್ಲಿ ನೀಲಿಗಟ್ಟಿದೆ. ಎದೆ ಮತ್ತು ಹೊಟ್ಟೆಗೆ ಗಾಯಗಳಾಗಿವೆ. ಇವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಂಡೇಟಿನಿಂದ ಮೃತಪಟ್ಟ ಸುಖವಿಂದರ್ ಸಿಂಗ್ ಅವರ ಮೃತದೇಹ ಇಟ್ಟಿರುವ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ವ್ಯಾಪಕ ಕಾರ್ಯಾಚರಣೆ

ಆರೋಪಿಗಳು ತಂಗಿದ್ದರು ಎನ್ನಲಾದ ಖಾಸಗಿ ಹೋಟೆಲ್‌ವೊಂದರ ರೂಮುಗಳನ್ನು ಪೊಲೀಸರು ಶುಕ್ರವಾರ ಪರಿಶೀಲಿಸಿದರು. ಇದರ ಜತೆಗೆ, ಇನ್ನಿತರ ಹೋಟೆಲ್‌ಗಳಿಗೆ ತೆರಳಿ ಅಲ್ಲಿ ತಂಗಿರುವವರ ವಿವರ ಪಡೆದುಕೊಂಡರು.

ಆರೋಪಿಗಳು ಪರಾರಿಯಾದ ರಸ್ತೆಯ ಸಿಸಿಟಿವಿ ಕ್ಯಾಮೆರಾಗಳು, ಅಲ್ಲಿಂದ ಅವರು ಹೊರ ಹೋಗಿರಬಹುದಾದ ಊರುಗಳ ವಿವರಗಳನ್ನು ಸಂಗ್ರಹಿಸಿ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.