ADVERTISEMENT

ಪೊಲೀಸರ ‘ಪ್ಯಾಷನ್‌’ ತುಂಬಾ ಇಷ್ಟ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:31 IST
Last Updated 25 ನವೆಂಬರ್ 2019, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಗುಮ್ಮ ಬಂದ ಗುಮ್ಮ...’ ಹಾ, ಈ ಸಾಲುಗಳನ್ನು ಎಲ್ಲೋ ಕೇಳಿದ್ದೇನೆ ಅನ್ನಿಸುತ್ತಿದೆಯಾ? ಕನ್ನಡದ ‘ಟಗರು’ ಚಲನಚಿತ್ರದ ಹಾಡಿನ ಸಾಲಿದು. ‘ನಿಮ್ಮಯ ರಾತ್ರಿಗಳಲಿ ಕಾಯುವ ಎಚ್ಚರ ನಾವು... ಖಾಕಿಯ ರೂಪ ತೊಟ್ಟು ನಿಂತಿರೋ ದೀಪ ನಾವು...’ ಎಷ್ಟು ಅರ್ಥಗರ್ಭಿತ ಅನ್ನಿಸುತ್ತಿದೆ.

ಚಿಕ್ಕ ವಯಸ್ಸಿನಿಂದಲೂ ಪೊಲೀಸರನ್ನು ಕಂಡರೆ ಒಂಥರಾ ಭಯ. ಆ ಭಯ ದುಪಟ್ಟಾದದ್ದು ಅಮ್ಮ ಊಟ ಮಾಡಲಿಲ್ಲ ಎಂದರೆ, ‘ಪೊಲೀಸ್‌ ಮಾಮನನ್ನ ಕರೆಯುತ್ತೇನೆ. ಅವರು ಜೈಲಿಗೆ ಹಾಕುತ್ತಾರೆ’ ಎಂದು ಗದರಿಸಿದಾಗ. ಇದಾಗಿ ಪ್ರೈಮರಿ ಶಾಲೆಗೆ ಬಂದಾಗ ಕಳ್ಳ ಪೊಲೀಸ್‌ ಆಡುವಾಗ ತಿಳಿದದ್ದು ಪೊಲೀಸರೆಂದರೆ ನಮ್ಮನ್ನು ಕಳ್ಳಕಾಕರಿಂದ ಕಾಯುವವರು ಎಂದು.

ಆಗ ಮೊದಲಿದ್ದ ಭಯ ಆದಷ್ಟು ಕಡಿಮೆಯಾಗಿತ್ತು. ಇದಾದ ನಂತರ ಹೈಸ್ಕೂಲಿನಲ್ಲಿ ಓದುವಾಗ ಮಹಿಳೆಯರಿಗೆ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ರಕ್ಷಣಾತ್ಮಕ ಕಾರ್ಯಾಗಾರದಲ್ಲಿ ಪಾಲ್ಗೊಂಡಾಗ, ಪೊಲೀಸರು ‘ಜನಸ್ನೇಹಿ’ ಎಂದು ಮನವರಿಕೆಯಾಗಿತ್ತು.

ADVERTISEMENT

ಮುಂದೆ ಪಿಯುಸಿ ಓದುತ್ತಿದ್ದ ಸಮಯ. ನಾನು ‘ಎನ್‌ಸಿಸಿ’ಯಲ್ಲಿ ‘ಬಿ’ ಸರ್ಟಿಫಿಕೇಟ್ ಮಾಡುತ್ತಿದ್ದಾಗ ಎನ್‌ಸಿಸಿ ಯೂನಿಫಾರ್ಮ್‌ ಧರಿಸಿ ಹೆಲ್ಮೆಟ್ ಧರಿಸದೇ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೆ. ಆಗ ಹೃದಯ ಬಾಯಿಗೆ ಬಂದಿತ್ತು. ಪೊಲೀಸ್ ಸ್ಟೇಷನ್‌ ಮೆಟ್ಟಿಲು ಹತ್ತಬೇಕು ಎಂದು. ಏಕೆಂದರೆ ಫೈನ್‌ ಕಟ್ಟಲು ನಾನು ಹಣ ಇಟ್ಟುಕೊಂಡಿರಲಿಲ್ಲ. ಕಣ್ಣಂಚಲ್ಲಿ ಹನಿ ಜಿನುಗಿತ್ತು; ಏನಾಗುತ್ತದೆಯೋ ಎಂಬ ಭಯದಲ್ಲಿ.

ಆದರೆ, ಅಲ್ಲಿನ ಪೊಲೀಸ್ ಅಧಿಕಾರಿ, ‘ಹೆಲ್ಮೆಟ್‌ ಧರಿಸುವುದು ಬಹಳ ಮುಖ್ಯ, ನಿಮಗೇ ಒಳ್ಳೆಯದು’ ಎಂದು ಹೇಳಿ, ‘ನೀನು ಎನ್‌ಸಿಸಿ ಯೂನಿಫಾರ್ಮ್‌ ಹಾಕಿದ್ದೀಯ. ನಾವೂ ಖಾಕಿ ಹಾಕಿದ್ದೇವೆ. ನಾವು ಬದ್ಧತೆಯಿಂದ ನಡೆದುಕೊಳ್ಳಬೇಕು’ ಎಂದು ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದರು.

ಮುಂದೆ ‘ಸೈಬರ್‌ ಕ್ರೈಂ’ ಬಗ್ಗೆ ನಮ್ಮ ಕಾಲೇಜಿನಲ್ಲಿ ಜಾಗೃತಿ ಮೂಡಿಸಿದ್ದರು. ಅದರಿಂದ ಬಹಳ ಉಪಯೋಗವಾಗಿತ್ತು. ‘ಆನ್‌ಲೈನ್‌ ಪ್ರಿಡೇಟರ್ಸ್‌’ ಇರುತ್ತಾರೆ ಎಚ್ಚರ ಎಂದು ಪೊಲೀಸರು ನಮಗೆ ತಿಳಿಹೇಳಿದ್ದರು. ಅಂತಹ ಘಟನೆಯೇನಾದರೂ ನಡೆದರೆ ಧೃತಿಗೆಡದೇ ಬಂದು ನಮಗೆ ದೂರು ಕೊಡಿ. ನಾವು ನಿಮ್ಮ ನೆರವಿಗೆ ಧಾವಿಸುತ್ತೇವೆ ಎಂದಾಗ ನಮ್ಮಲ್ಲಿ ಧೈರ್ಯ ಮೂಡಿತ್ತು.

ನಾನು ಮೈಸೂರಿನಲ್ಲಿ ‘ಡಿಗ್ರಿ’ ಓದುತ್ತಿದ್ದ ಸಮಯ. ‘ಯುವ ದಸರಾ’ ಕಾರ್ಯಕ್ರಮ ನಡೆಯುತ್ತಿತ್ತು. ಆಗ ನಾಲ್ವರು ಸ್ನೇಹಿತೆಯರು ದ್ವಿಚಕ್ರವಾಹನದಲ್ಲಿ ಹೋಗಿದ್ದೆವು. ಯುವದಸರೆಯ ಮನರಂಜನಾ ಕಾರ್ಯಕ್ರಮ ಶುರುವಾಗುವುದೇ ಸಂಜೆ 7 ಗಂಟೆ ಸುಮಾರಿಗೆ. ನಾವು ಮನರಂಜನೆಯಲ್ಲಿ ಮೈಮರೆತು ಗಡಿಯಾರ ನೋಡಿದಾಗ 12.30ರ ಮಧ್ಯರಾತ್ರಿ! ನಾವು ಹೊರಡಲು ಅಣಿಯಾದೆವು. ಆಗ ಅಲ್ಲಿದ್ದ ಪೊಲೀಸರು ನಮ್ಮ ಮನೆಯವರೆಗೂ ಸುರಕ್ಷಿತವಾಗಿ ಬಿಟ್ಟು ಹೋಗಿದ್ದರು. ಅವರ ಬದ್ಧತೆಯನ್ನು ನಾವು ಅಭಿನಂದಿಸಿದ್ದೆವು.

ನಾನು 2ನೇ ವರ್ಷದ ಬಿ.ಎ ಓದುತ್ತಿದ್ದಾಗ ‘ಪಾಸ್‌ಪೋರ್ಟ್ ವೆರಿಫಿಕೇಷನ್‌’ ಬಂದಿತ್ತು. ಅದೇ ಮೊದಲು ನಾನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದು. ನಾನು ಯಾವುದೇ ಅಪರಾಧ ಮಾಡಿದ್ದಲ್ಲದೇ ಇದ್ದರೂ ಒಂಥರಾ ಅಳುಕು ನನ್ನಲ್ಲಿ. ಆದರೆ, ಪೊಲೀಸ್ ಠಾಣೆಯ ಸಿಬ್ಬಂದಿ ನನ್ನನ್ನು ನೋಡಿ ಮುಗುಳ್ನಕ್ಕು ಬರಮಾಡಿಕೊಂಡಿದ್ದರು.

ಇದನ್ನು ಕಂಡು ನನಗಾದ ಸೋಜಿಗ ಎಂದರೆ ಹಗಲು–ರಾತ್ರಿ ಆರೋಪಿಗಳ ಪತ್ತೆ ಕಾರ್ಯ, ಒತ್ತಡದಲ್ಲಿರುವ ಪೊಲೀಸರು ನಗುತ್ತಾರೆ ಎನ್ನುವುದು! ಅವರು ಆರೋಪಿಗಳೊಂದಿಗೆ ಇದ್ದರೂ, ನಿರಪರಾಧಿಗಳೊಂದಿಗೆ, ಇನ್ನಿತರ ಕೆಲಸಗಳಿಗೆ ಬರುವ ನಾಗರಿಕರೊಂದಿಗೆ ಬಹಳ ತಾಳ್ಮೆಯಿಂದ ನಡೆದು ಕೊಳ್ಳುತ್ತಾರೆ. ಅವರ ಮಾನಸಿಕ ಸಮತೋಲನ ಬಹಳ ಗಟ್ಟಿಯಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತೆ ಕಂಡಿತ್ತು.

ಇದಾದ ಒಂದು ವರ್ಷದ ನಂತರ ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಪತ್ರಿಕೆಯೊಂದರಲ್ಲಿ ಇಂಟರ್ನ್‌ಶಿಪ್‌ಗೆ ಹೋಗಿದ್ದೆ. ಆಗ ನನ್ನನ್ನು ಕ್ರೈಂ ಬೀಟ್‌ಗೆ ಕಳುಹಿಸಿದ್ದರು. ಮೈಸೂರಿನ ಒಂದು ಸ್ಥಳದಲ್ಲಿ ರೌಡಿ ಪರೇಡ್‌ ನಡೆಯುತ್ತಿತ್ತು. ಅಲ್ಲಿ ವರದಿ ಮಾಡಲು ಹೋದಾಗ ರೌಡಿಗಳನ್ನು ಬೇರೆಯದ್ದೇ ರೀತಿಯ ಭಾಷೆಯಲ್ಲಿ ಪೊಲೀಸರು ಬಯ್ಯುತ್ತಿದ್ದರು. ಆಗ ಒಬ್ಬ ಹಿರಿಯ ಪೊಲೀಸ್‌ ಅಧಿಕಾರಿ ನನ್ನಲ್ಲಿ ಹೇಳಿದ್ದರು. ‘ಈ ರೀತಿ ಬಯ್ಯದೇ ಇದ್ದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಈ ರೌಡಿಗಳು ಹಾಳುಮಾಡುತ್ತಾರೆ’ ಎಂದು. ಅದು ಸರಿಯಾದ ನಡೆಯೆಂದೇ ನನಗನ್ನಿಸಿತ್ತು.

ಸಾಯಂಕಾಲ ಮೈಸೂರಿನ ರಸ್ತೆಗಳಲ್ಲಿ ಪೊಲೀಸ್ ಗಸ್ತು ನಡೆಯುತ್ತಿತ್ತು. ‘ಸರ, ಮಾಂಗಲ್ಯ ಸರ ಕದಿಯುವವರಿದ್ದಾರೆ... ಹುಷಾರ್‌’ ಎಂದು ಎಚ್ಚರಿಸಿ ಪೊಲೀಸರು ಮುಂದೆ ಸಾಗುತ್ತಿದ್ದರು. ಇದು ಸಾಮಾನ್ಯ ಜನರ ಮೇಲೆ ಪೊಲೀಸರಿಗೆ ಇರುವ ಬದ್ಧತೆಗೆ ಕೈಗನ್ನಡಿಯಾಗಿತ್ತು.

ಇದಾದ ನಂತರ ನನಗೆ ಸರ್ಕಾರಿ ಹುದ್ದೆ ಸಿಕ್ಕಾಗ, ಪುನಃ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿದೆ. ಅಲ್ಲಿನ ಸ್ಟೇಷನ್‌ ಇಂಚಾರ್ಜ್‌ ಇದ್ದವರು, ‘ಸಿಹಿಯೆಲ್ಲಿ?’ ಎಂದು ಕೇಳಿ ‘ಹ್ಯಾಂಡ್ ಷೇಕ್‌’ ಮಾಡಿ, ‘ಆಲ್‌ ದಿ ಬೆಸ್ಟ್‌’ ಎಂದು ಹೇಳಿ ಕಳುಹಿಸಿಕೊಟ್ಟಿದ್ದರು. ಇದನ್ನು ಮೆಲುಕು ಹಾಕುತ್ತ ಸ್ಟೇಷನ್ ಮೆಟ್ಟಿಲು ಇಳಿದಿದ್ದೆ.

ಹೀಗೆ, ಪ್ರತಿಯೊಂದು ಸನ್ನಿವೇಶದಲ್ಲಿ ಪೊಲೀಸರಿಗೆ ಧನ್ಯವಾದಗಳನ್ನು ಹೇಳಿದವಳು ನಾನು. ಮುಂದೆ ಪೊಲೀಸ್ ಅಧಿಕಾರಿಯೊಬ್ಬರ ಹತ್ತಿರ ಮಾತನಾಡಿದಾಗ ಗೊತ್ತಾಗಿದ್ದು, ಪೊಲೀಸ್‌ ಸೇವೆ ಸುಲಭದ್ದಲ್ಲ. ಹಬ್ಬ ಹರಿದಿನ ಎನ್ನುವ ಹಾಗಿಲ್ಲ. ಹಗಲು– ರಾತ್ರಿಗಳಿಲ್ಲ. ಮದುವೆ, ಮುಂಜಿಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಕೊನೆಗೆ ತಮ್ಮ ಮಕ್ಕಳ ಶಾಲಾ ದಿನಾಚರಣೆಗೂ ಗೈರು ಹಾಜರಾಗುವ ಸಂದರ್ಭ ಎದುರಿಸಬೇಕಾಗುತ್ತದೆ. ಬಂದೋಬಸ್ತ್‌ ಎದುರಿಸುವ ಸಂದರ್ಭ ಬಂದಲ್ಲಿ ಊಟ ತಿಂಡಿಗೂ ಸಮಯ ಸಿಗುವುದಿಲ್ಲ. ಮನೆಯವರಿಗೆ, ಸ್ನೇಹಿತರಿಗೆ ಸಮಯ ಕೊಡುವುದು ಕಷ್ಟ ಎಂದು.

ಆದರೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಎಷ್ಟೇ ಕಷ್ಟವೆನಿಸಿದರೂ ಪೊಲೀಸರು ‘ಪ್ಯಾಷನ್‌’ನಿಂದ ಕೆಲಸ ಮಾಡುತ್ತಾರೆ ಎನ್ನುವುದೇ ಅವರ ಮೇಲಿನ ಗೌರವ ಹೆಚ್ಚಿಸುವಂತೆ ಮಾಡುತ್ತದೆ ಅಲ್ಲವೇ ಗೆಳೆಯರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.