ADVERTISEMENT

ರೌಡಿಗಳ ಮೇಲೆ ಪೊಲೀಸರ ಹದ್ದಿನಕಣ್ಣು

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 13:18 IST
Last Updated 5 ಜನವರಿ 2019, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ರೌಡಿಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ಯಾವುದೇ ರೀತಿಯ ರೌಡಿ ಚಟುವಟಿಕೆಗಳು ನಾಗರಿಕರ ಗಮನಕ್ಕೆ ಬಂದಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ರೌಡಿಗಳು ಸಾರ್ವಜನಿಕರಿಗೆ ತೊಂದರೆ ನೀಡುವುದು, ಹಫ್ತಾ ವಸೂಲಿ ಮಾಡುವುದು, ಬಲವಂತವಾಗಿ ರಿಯಲ್ ಎಸ್ಟೇಟ್ ದಂಧೆ ನಡೆಸುವುದು, ಭೂ ಕಬಳಿಕೆ ಮಾಡುವುದು, ಹಲ್ಲೆ ಮತ್ತು ಭಯ ಪಡಿಸುವುದು, ಮಹಿಳೆಯರನ್ನು ಚುಡಾಯಿಸುವುದು, ಬ್ಲಾಕ್ ಮೇಲ್ ಮಾಡಿದರೆ ತಕ್ಷಣ ರೌಡಿ ಪ್ರತಿಬಂಧಕ ದಳವನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಿದ್ದಾರೆ.

ರೌಡಿ ಪ್ರತಿಬಂಧಕ ದಳವು ಚುರುಕಿನ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಯಾವುದೇ ರೀತಿಯ ಅಕ್ರಮದಲ್ಲಿ ಭಾಗಿಯಾಗುವುದನ್ನು ಸಹಿಸುವುದಿಲ್ಲ. ಯಾವುದೇ ರೀತಿಯ ಅಹಿತಕರ ಚಟುವಟಿಕೆ ಕಂಡುಬಂದಲ್ಲಿ ಬಂಧಿಸಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 2017ರಲ್ಲಿ ಈ ದಳವು ರಚನೆಯಾಗಿದ್ದು, ರೌಡಿ ಚಟುವಟಿಕೆ ಹತ್ತಿಕ್ಕುವುದು ಇದರ ಆಶಯ. ಅಲ್ಲದೇ, ರೌಡಿಗಳ ಮನಃಪರಿವರ್ತನೆ ಮಾಡಿ ಸಜ್ಜನರನ್ನಾಗಿ ರೂಪಿಸುವುದು ಉದ್ದೇಶ ಎಂದು ಹೇಳಿದ್ದಾರೆ.

ADVERTISEMENT

‘ನಗರವನ್ನು ರೌಡಿ ಚಟುವಟಿಕೆಯಿಂದ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಪದೇ ಪದೇ ರೌಡಿ ಚಟುವಟಿಕೆಯಲ್ಲಿ ಕಂಡುಬರುವವರನ್ನು ಗಡೀಪಾರು ಮಾಡುತ್ತೇವೆ. ಗೂಂಡಾ ಕಾಯ್ದೆಯಡಿ ಕ್ರಮವಹಿಸುತ್ತೇವೆ’ ಎಂದು ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರೌಡಿ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಮೊ: 9480802266 ಅಥವಾ ದೂ: 0821– 2418100, 2418339 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.