ADVERTISEMENT

‘ಭಯ ಬಿಡಿ... ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸವಿರಲಿ’

ಮತ್ತೊಬ್ಬರೊಂದಿಗಿನ ಹೋಲಿಕೆ ಒಳ್ಳೆಯದಲ್ಲ; ಟಾರ್ಗೆಟ್‌ ಬೇಕಿಲ್ಲ: ಡಾ.ಬಿ.ಎನ್.ರವೀಶ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 10:59 IST
Last Updated 24 ಫೆಬ್ರುವರಿ 2020, 10:59 IST
ಡಾ.ಬಿ.ಎನ್.ರವೀಶ್
ಡಾ.ಬಿ.ಎನ್.ರವೀಶ್   

ಮೈಸೂರು: ‘ದ್ವಿತೀಯ ಪಿಯುಸಿ ಪರೀಕ್ಷೆಗೆ ವಾರವಷ್ಟೇ ಉಳಿದಿದೆ. ಈ ಸಂದರ್ಭ ಹೊಸ ಓದು ಬೇಕಿಲ್ಲ. ಪುನರ್‌ ಮನನಕ್ಕಷ್ಟೇ ಒತ್ತು ಕೊಡಿ. ಪರೀಕ್ಷಾ ಭಯಕ್ಕೀಡಾಗಿ ವಿಚಲಿತರಾಗಬೇಡಿ. ದೈಹಿಕ ಚಟುವಟಿಕೆ ನಿಯಮಿತವಾಗಿರಲಿ. ಮೊಬೈಲ್‌ನಿಂದ ದೂರವಿರಿ...’

‘ಜ್ಞಾಪಕ ಶಕ್ತಿ ವೃದ್ಧಿಗೆ ಯಾವುದೇ ಔಷಧಿಯಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಮನೋ ಸಾಮರ್ಥ್ಯದ ಜತೆ ದೈಹಿಕ ಸಾಮರ್ಥ್ಯವೂ ಮುಖ್ಯವಾದುದು. ಪರೀಕ್ಷೆಗಾಗಿ ರಾತ್ರಿಯಿಡಿ ನಿದ್ದೆಗೆಟ್ಟು ಓದಬೇಡಿ. ರಾತ್ರಿ 10–11 ಗಂಟೆಗೆ ಮಲಗಿ. ಬೆಳಿಗ್ಗೆ 5–6 ಗಂಟೆಗೆ ಎದ್ದೇಳಿ. ಊಟ–ನಿದ್ರೆ ಸಮರ್ಪಕವಾಗಿರಲಿ...’

ಪರೀಕ್ಷೆ ಸನ್ನಿಹಿತವಾದ ಹೊತ್ತಿನಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಸಮೂಹದಲ್ಲಿನ ಪರೀಕ್ಷಾ ಆತಂಕ, ಭಯ ದೂರಗೊಳಿಸಲಿಕ್ಕಾಗಿ ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಸೋಮವಾರ ಆಯೋಜಿಸಿದ್ದ ‘ಫೋನ್‌ ಇನ್‌’ನಲ್ಲಿ, ಮೈಸೂರು ಮೆಡಿಕಲ್‌ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್.ರವೀಶ್‌ ಹೇಳಿದ ಕಿವಿಮಾತುಗಳಿವು.

ADVERTISEMENT

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ಸಮಯವಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ. ನಿತ್ಯವೂ 8 ಗಂಟೆಯ ಓದು ನಿಯಮಿತವಾಗಿರಲಿ. ಒಂದು ತಾಸಿನ ದೈಹಿಕ ಚಟುವಟಿಕೆ ಕಡ್ಡಾಯಗೊಳ್ಳಲಿ. ಯಶಸ್ಸಿಗಾಗಿ ‘ಪಿಕ್ಯುಆರ್‌ಎಸ್‌ಟಿ’ ಸೂತ್ರ ಪಾಲಿಸಿ’ ಎಂದು ತಮ್ಮದೇ ಸೂತ್ರವೊಂದನ್ನು ವಿವರಿಸಿದರು.

ಪಿ–ಪ್ಲ್ಯಾನಿಂಗ್‌: ಪರೀಕ್ಷೆಗೆಷ್ಟು ದಿನ ಉಳಿದಿದೆ ಎಂಬುದನ್ನು ಲೆಕ್ಕ ಹಾಕಿ. ನಿತ್ಯವೂ 8 ಗಂಟೆಯಂತೆ ಸಮಯ ನಿಗದಿ ಪಡಿಸಿಕೊಳ್ಳಿ. ಆರು ವಿಷಯಕ್ಕೂ ಸಮಾನ ಸಮಯ ಕೊಡಿ. ಆಸಕ್ತಿಯಿಂದ ಓದುವ ಮೂಲಕ ವೇಳಾಪಟ್ಟಿಯನ್ನು ಕಾರ್ಯರೂಪಕ್ಕೆ ತನ್ನಿ.

ಕ್ಯು–ಕ್ವಶ್ಚನ್‌: ಪರೀಕ್ಷೆಗೆ ಪ್ರಮುಖ ಪ್ರಶ್ನೆಗಳನ್ನಷ್ಟೇ ಕೇಳೋದು. ಅದೂ ಪಠ್ಯಕ್ರಮದಲ್ಲಿರುವವನ್ನೇ. ಪಾಸಾಗುವ ಜತೆ, ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಅಡ್ಡಿಯಿರಲ್ಲ. ಇಡೀ ಪುಸ್ತಕವನ್ನು ಓದುವ ಬದಲು ಪ್ರಮುಖ ಪ್ರಶ್ನೆಗಳ ಕಡೆಗಿರಲಿ ನಿಮ್ಮ ಗಮನ.

ಆರ್‌–ರಿವಿಷನ್: ಹೊಸ ಓದಿಗಿಂತ ಪುನರ್ ಮನನವೇ ಹೆಚ್ಚಿರಲಿ.

ಎಸ್‌–ಸಮ್ಮರಿ–ಸಫೋರ್ಟ್‌: ಇಡೀ ಓದಿನ ಟಿಪ್ಪಣಿ ಬರೆದುಕೊಳ್ಳಿ. ಸಮಸ್ಯೆ, ಸಂಶಯ ಕಾಡಿದರೆ ಶಿಕ್ಷಕರ ಬೆಂಬಲ ಪಡೆದು ಪರಿಹರಿಸಿಕೊಳ್ಳಿ.

ಟಿ–ಟೆಸ್ಟ್‌: ನಿತ್ಯವೂ ನಿಮಗೆ ನೀವೇ ಪರೀಕ್ಷೆ ಮಾಡಿಕೊಳ್ಳಿ. ಓದಿದ್ದು–ಬರೆದಿದ್ದು ಎಷ್ಟು ನೆನಪಿದೆ ? ಎಂಬುದನ್ನು ಅಂದಂದೇ ಪರೀಕ್ಷೆಗೊಡ್ಡಿಕೊಳ್ಳುವ ಮೂಲಕ, ನಿಮ್ಮೊಳಗಿನ ಸಾಮರ್ಥ್ಯ ಅರಿತುಕೊಂಡು, ಪರೀಕ್ಷೆಗಾಗಿ ಸಿದ್ಧರಾಗಿ’ ಎಂದು ತಮ್ಮ ಸೂತ್ರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಡಾ.ಬಿ.ಎನ್.ರವೀಶ್‌.

ಒಲಂಪಿಕ್ಸ್‌ ಅಲ್ಲ; ಸಾಕಷ್ಟು ಅವಕಾಶ

‘ಪರೀಕ್ಷೆ ಒಲಂಪಿಕ್ಸ್‌ ಅಲ್ಲ. ಬದುಕಿಗೆ ಮುಖ್ಯವೂ ಅಲ್ಲ. ಬದುಕಿನ ಒಂದು ಅವಿಭಾಜ್ಯ ಅಂಗವಷ್ಟೇ. ಒಲಂಪಿಕ್ಸ್‌ ಸೇರಿದಂತೆ ಯಾವುದೇ ಆಟದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳಿರುತ್ತವಷ್ಟೇ. ಎಷ್ಟೇ ಜನ ಭಾಗವಹಿಸಿದ್ದರು ಪ್ರಶಸ್ತಿ ಸಿಗೋದು ಮೂವರಿಗೆ ಮಾತ್ರ.

ಪರೀಕ್ಷೆ ಆಗಲ್ಲ. ಭಾಗವಹಿಸಿದ ಎಲ್ಲರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವಿರುತ್ತದೆ. ಎಲ್ಲರೂ ಔಟ್‌ ಆಫ್‌ ಔಟ್‌ ತೆಗೆಯಬೇಕು ಎಂಬ ಮನೋಭಾವ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಪರೀಕ್ಷೆಯೇ ಬದುಕಲ್ಲ. ಸಾಕಷ್ಟು ಅವಕಾಶಗಳು ನಮಗಾಗಿರುತ್ತವೆ’ ಎಂದು ರವೀಶ್‌ ಸ್ಫೂರ್ತಿಯ ಮಾತುಗಳನ್ನೇಳಿದರು.

ಪರೀಕ್ಷೆ ಎಂದರೇ ಭಯ !

ಪರೀಕ್ಷೆ ಎಂದರೇ ಭಯ. ಇದು ಸಹಜವೂ ಹೌದು. ಸುಲಭವಾದ ಪ್ರಶ್ನೆಗಳಿದ್ದರೆ ಪರೀಕ್ಷೆ ಎನಿಸಿಕೊಳ್ಳಲ್ಲ. ಕಠಿಣವಾಗಿದ್ದರೆ ಪರೀಕ್ಷೆ. ಇದಕ್ಕೆ ಯಾರೊಬ್ಬರೂ ವಿಚಲಿತರಾಗಬೇಕಿಲ್ಲ. ಫಲಿತಾಂಶವನ್ನು ಹೇಗಿರುತ್ತೆ ಹಾಗೆಯೇ ಸ್ವೀಕರಿಸಿ. ಆತಂಕಕ್ಕೊಳಗಾಗಬೇಡಿ. ಆತಂಕವಾದಾಗ ನೀರು ಕುಡಿಯಿರಿ. ನೀರು ಕುಡಿಯುವಿಕೆ ಆತಂಕವನ್ನು ದೂರ ಮಾಡುತ್ತದೆ. ಇದರ ಜತೆ ದೀರ್ಘ ಉಸಿರು ತೆಗೆದುಕೊಂಡು ನಿಟ್ಟುಸಿರು ಬಿಡಿ. ನಿಮ್ಮೊಳಗಿನ ಭಯ, ಆತಂಕ ಇದರಿಂದ ಸಾಕಷ್ಟು ದೂರವಾಗಲಿದೆ ಎಂದು ರವೀಶ್‌ ಸಲಹೆ ನೀಡಿದರು.

ನನ್ನಿಂದಾಗಲ್ಲ ಎಂಬುದನ್ನು ಬಿಡಿ...

ಯಾವೊಂದು ವಿಷಯವೂ ಕಠಿಣವಲ್ಲ. ಪಠ್ಯಕ್ರಮ, ಪರೀಕ್ಷೆಯ ಪ್ರಶ್ನೆ ವೈಜ್ಞಾನಿಕವಾಗಿಯೇ ಇರುತ್ತವೆ. ಮಕ್ಕಳ ಮಾನಸಿಕ ಸಾಮರ್ಥ್ಯ ಅರಿತೇ ಇವನ್ನು ಕೇಳಲಾಗಿರುತ್ತದೆ. ನನ್ನಿಂದ ಸಾಧ್ಯವಿಲ್ಲ. ನನಗೆ ಗಣಿತ ಕಷ್ಟ, ಭೌತ ವಿಜ್ಞಾನ ತುಂಬಾ ಕಷ್ಟ ಎಂಬುದನ್ನು ಮನಸ್ಸಿನಿಂದ ತೆಗೆದು ಹಾಕಿ...

ಆಸಕ್ತಿಯಿಂದ ಸುಲಭ ಎಂದೇ ಓದಿ. ಓದಿನಲ್ಲಿ ಏಕಾಗ್ರತೆಯಿರಲಿ. ಆ ಏಕಾಗ್ರತೆಯಲ್ಲಿ ಗ್ರಹಿಕೆ ಸೂಕ್ಷ್ಮವಾಗಿರಲಿ. ಗ್ರಹಿಸಿದ್ದನ್ನು ಪುನರ್‌ ಮನನ ಮಾಡಿಕೊಂಡು ಪರೀಕ್ಷೆ ಬರೆಯಿರಿ. ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಸದಾ ನಿಮ್ಮೊಳಗಿರಲಿ. ಆಗ ಎಲ್ಲವನ್ನೂ ನಿರಾತಂಕವಾಗಿ ನಿಭಾಯಿಸುತ್ತೀರಿ ಎಂಬ ಕಿವಿಮಾತನ್ನು ರವೀಶ್‌ ಹೇಳಿದರು.

ದೊಡ್ಡ ಶಾಪವಾಗಿರುವ ಟಾರ್ಗೆಟ್‌; ಹೋಲಿಕೆ

ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಸಿಗ್ತಿಲ್ಲ. ಸಂಖ್ಯಾತ್ಮಕ ಶಿಕ್ಷಣವೇ ಆದ್ಯತೆ ಪಡೆದಿದೆ. ಶಿಕ್ಷಣ ಸಂಸ್ಥೆಗಳು, ಪೋಷಕರು, ಮಕ್ಕಳಿಗೆ ಟಾರ್ಗೆಟ್‌ ಕೊಡುವುದನ್ನು ಮೊದಲು ಬಿಡಬೇಕಿದೆ. ವಿದ್ಯಾರ್ಥಿಗಳ ಮನಸ್ಸಿಗೆ ಟಾರ್ಗೆಟ್‌ ಎಂಬುದೇ ದೊಡ್ಡ ಶಾಪವಾಗಿ ಕಾಡುತ್ತಿದೆ. ಒತ್ತಡವನ್ನು ಹಾಕಲೇಬೇಡಿ.

ಮತ್ತೊಬ್ಬರೊಂದಿಗೆ ಎಂದಿಗೂ ಹೋಲಿಸಬೇಡಿ. ಇದು ತುಂಬಾ ಅಪಾಯಕಾರಿಯಾದುದು. ಪೋಷಕರು ಇದನ್ನು ಮನೆಗಳಲ್ಲಿಯೂ ಮಾಡಬಾರದು. ಹೋಲಿಕೆ ಅತಿಯಾದರೆ ಮಕ್ಕಳಲ್ಲಿ ಖಿನ್ನತೆ ಕಾಡುತ್ತದೆ. ಇದು ಅನಾಹುತಕ್ಕೂ ರಹದಾರಿಯಾಗಲಿದೆ ಎಂಬ ಎಚ್ಚರಿಕೆಯ ಮಾತುಗಳನ್ನು ಡಾ.ರವೀಶ್ ತಿಳಿಸಿದರು.

ಹೋಲಿಕೆಯ ಬದಲು ಪ್ರಶಂಸೆ, ಮೆಚ್ಚುಗೆಯ ಮಾತನಾಡಿ. ಬೆನ್ನುತಟ್ಟಿ. ಇದೂ ಸಹ ಅತಿಯಾಗಬಾರದು. ಒಂದು ಇತಿಮಿತಿಯ ಚೌಕಟ್ಟಿನೊಳಗೆ ಇರಲಿ. ಮಗುವಿಗೂ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಕೊಡಿ. ಯಾವ ಕಾರಣಕ್ಕೂ ತಮ್ಮ ಆತಂಕ–ಆಶಯವನ್ನು ಮಕ್ಕಳ ಮೇಲೆ ಹೇರಬೇಡಿ ಎಂಬ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.