ADVERTISEMENT

ಹಲವು ವರ್ಷಗಳ ಶ್ರಮ ಫಲ ನೀಡಿದೆ: ಪ್ರಜ್ವಲ್ ದೇವ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 23:22 IST
Last Updated 4 ಜನವರಿ 2024, 23:22 IST
<div class="paragraphs"><p>ಎಸ್‌.ಡಿ.ಪ್ರ<em>ಜ್ವಲ್ ದೇವ್</em></p></div>

ಎಸ್‌.ಡಿ.ಪ್ರಜ್ವಲ್ ದೇವ್

   

ಮೈಸೂರು: ಎರಡು ವರ್ಷಗಳಿಂದ ದೇಶದಲ್ಲಿ ಮತ್ತು ಹೊರದೇಶಗಳಲ್ಲಿ ಐಟಿಎಫ್‌ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದೆ. ಹೀಗಾಗಿ ಈ ಅವಕಾಶ ಸಿಕ್ಕಿದೆ’ ಎಂದು ಎಸ್‌.ಡಿ. ಪ್ರಜ್ವಲ್‌ ದೇವ್ ಪ್ರತಿಕ್ರಿಯಿಸಿದರು.

‘ಆರು ಮಂದಿಯ ತಂಡದಲ್ಲಿ ನಾನೂ ಇರುವುದನ್ನು ಕೇಳಿ ಪೋಷಕರು ಸಂತಸಗೊಂಡಿದ್ದಾರೆ. ಹಲವು ವರ್ಷಗಳ ಪ್ರಯತ್ನ ಫಲ ನೀಡಿದೆ. ಉತ್ತಮ ಪ್ರದರ್ಶನ ನೀಡಬೇಕೆಂದು ಎಂದಿನಂತೆ ತಯಾರಿ ನಡೆಸಿರುವೆ. ಪಾಕಿಸ್ತಾನಕ್ಕೆ ತೆರಳುವ ಮುನ್ನ ದೆಹಲಿಯಲ್ಲಿ ಇದೇ 27ರಿಂದ ಅಭ್ಯಾಸ ಶಿಬಿರವಿದ್ದು, ಅಲ್ಲಿಗೆ ಹೋಗುತ್ತಿರುವೆ’ ಎಂದು ಹೇಳಿದರು.

ADVERTISEMENT

ಪ್ರಹ್ಲಾದ್‌ ಶ್ರೀನಾಥ್‌ ನಂತರ ಇದೇ ಮೊದಲ ಬಾರಿ ಮೈಸೂರಿನ ಆಟಗಾರ ಡೇವಿಸ್‌ ಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಐಟಿಎಫ್‌– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ ಪ್ರಜ್ವಲ್, ಕಳೆದ ನವೆಂಬರ್‌ನಲ್ಲಿ ಮುಂಬೈ ಓಪನ್‌ ಟೂರ್ನಿಯ ಡಬಲ್ಸ್‌ನಲ್ಲಿ ನಾಲ್ಕರ ಘಟ್ಟ ತಲುಪಿದ್ದರು.  ‌

ನಗರದ ಮಹಾರಾಜ ಕಾಲೇಜಿನ ಟೆನಿಸ್‌ ಕೋರ್ಟ್‌, ಮೈಸೂರು ಟೆನಿಸ್‌ ಕ್ಲಬ್‌ ಅಂಗಳದ ಅಭ್ಯಾಸ ನಡೆಸುತ್ತಿದ್ದನ್ನು, ತಂದೆ ಎಸ್‌.ಎನ್‌.ದೇವರಾಜು (ನಿವೃತ್ತ ಡಿಸಿಎಫ್‌), ತಾಯಿ ಡಾ.ಎಂ.ಎಸ್‌.ನಿರ್ಮಲಾ (ಪ್ರಸೂತಿ ತಜ್ಞೆ), ಕೋಚ್‌ ಅರ್ಜುನ್ ಗೌತಮ್ ಅವರ ಪ್ರೋತ್ಸಾಹವನ್ನು 27 ವರ್ಷದ ಪ್ರಜ್ವಲ್ ಸ್ಮರಿಸಿದರು.

‘ತಾತ ಪ್ರೊ.ಶಿವಲಿಂಗಯ್ಯ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ನನಗೆ 9 ವರ್ಷವಿದ್ದಾಗ ಅವರೊಂದಿಗೆ ಅಲ್ಲಿಗೆ ಟೆನಿಸ್‌ ಆಡಲು ಹೋಗುತ್ತಿದ್ದೆ. ಆಗ, ಆಡುವ ಖುಷಿಯಷ್ಟೇ ಇತ್ತು. ನಂತರ ಸಾಧನೆ ಮಾಡುವ ಕನಸನ್ನು ಪೋಷಕರು ಹಾಗೂ ಕೋಚ್‌ಗಳಾದ ನಾಗರಾಜ್, ರಘುವೀರ್‌ ತುಂಬಿದರು. ಬೆಂಗಳೂರಿನ ಪ್ರಹ್ಲಾದ ಶ್ರೀನಾಥ್ ಹಾಗೂ ರೋಹನ್‌ ಬೋಪಣ್ಣ ಅಕಾಡೆಮಿಗಳಲ್ಲಿ ತರಬೇತಿ ಪಡೆದೆ’ ಎಂದರು.

ನಿತ್ಯ 4 ಗಂಟೆ ಟೆನಿಸ್‌ ಅಭ್ಯಾಸ ಹಾಗೂ 2 ಗಂಟೆ ಫಿಟ್‌ನೆಸ್‌ಗೆ ಮೀಸಲಿಟ್ಟಿದ್ದೇನೆ’ ಎಂದರು.

ಡೇವಿಸ್‌ ಕಪ್ ತಂಡಕ್ಕೆ ಪ್ರಜ್ವಲ್

ಬೆಂಗಳೂರು: ಕರ್ನಾಟಕದ ಎಸ್‌.ಡಿ. ಪ್ರಜ್ವಲ್ ದೇವ್ ಅವರನ್ನು, ಪಾಕಿಸ್ತಾನ ವಿರುದ್ಧ ಡೇವಿಸ್‌ ಕ‍ಪ್‌ ಪಂದ್ಯ ಆಡಲಿರುವ ಭಾರತ ತಂಡಕ್ಕೆ ಗುರುವಾರ ಸೇರ್ಪಡೆ ಮಾಡಲಾಯಿತು. ತಂಡದಿಂದ ಹಿಂದೆ ಸರಿದ ದಿಗ್ವಿಜಯ ಸಿಂಗ್ ಸ್ಥಾನಕ್ಕೆ ಪ್ರಜ್ವಲ್ ಆಯ್ಕೆಯಾಗಿದ್ದಾರೆ.

ಇಸ್ಲಾಮಾಬಾದಿನಲ್ಲಿ ಫೆಬ್ರುವರಿ 3 ಮತ್ತು 4ರಂದು ಈ ವಿಶ್ವಗುಂಪಿನ (1) ಪಂದ್ಯ ನಡೆಯಲಿದೆ. ಗೋವಾದಲ್ಲಿ ಕಳೆದ ವರ್ಷ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಕರ್ನಾಟಕ ಟೆನಿಸ್‌ ತಂಡದ ನೇತೃತ್ವ ವಹಿಸಿದ್ದರು. ಎಟಿಪಿ ಕ್ರಮಾಂಕಪಟ್ಟಿಯಲ್ಲಿ ಪ್ರಜ್ವಲ್‌ ದೇವ್‌ 609ನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡದ ಪಾಕ್ ಪ್ರಯಾಣಕ್ಕೆ ಕೋರಿ ಅಖಿಲ ಭಾರತ ಟೆನಿಸ್‌ ಸಂಸ್ಥೆ ಪ್ರಸ್ತಾವ ಕಳಿಸಿದೆ. ಆದರೆ ಇದುವರೆಗೆ ಒಪ್ಪಿಗೆ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.