ADVERTISEMENT

ಸಿದ್ದರಾಮಯ್ಯಗೆ ಅರ್ಥವ್ಯವಸ್ಥೆ ಗೊತ್ತಿಲ್ಲ: ಪ್ರತಾಪ ಸಿಂಹ ತಿರುಗೇಟು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 8:52 IST
Last Updated 13 ಫೆಬ್ರುವರಿ 2022, 8:52 IST
ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ   

ಮೈಸೂರು: ‘ಕಾನೂನು ಓದಿರುವ ಸಿದ್ದರಾಮಯ್ಯ ಅವರಿಗೆ ಅರ್ಥವ್ಯವಸ್ಥೆ ಬಗ್ಗೆ ಗೊತ್ತಿಲ್ಲ. 13 ಬಜೆಟ್‌ಗಳನ್ನು ಮಂಡಿಸಿದ್ದು ಬಿಟ್ಟರೆ, ಅವರ ಸಾಧನೆ ಬೇರೆ ಏನೂ ಇಲ್ಲ’ ಎಂದು ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದರು.

ಸಾಲ ದ್ವಿಗುಣಗೊಳಿಸಿದ್ದು ಮಾತ್ರ ಕೇಂದ್ರ ಹಾಗೂ ರಾಜ್ಯದ ಸರ್ಕಾರಗಳ ಸಾಧನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ‘ಕೆಂಗಲ್‌ ಹನುಮಂತಯ್ಯ ಅವರಿಂದ ಹಿಡಿದು 2013 ರಲ್ಲಿ ಜಗದೀಶ್‌ ಶೆಟ್ಟರ್‌ ತನಕ ಬಂದ ಎಲ್ಲ ಮುಖ್ಯಮಂತ್ರಿಗಳು ಮಾಡಿದ್ದ ಒಟ್ಟಾರೆ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಸಿದ್ದರಾಮಯ್ಯ ತಮ್ಮ ಐದು ವರ್ಷಗಳ ಅವಧಿಯಲ್ಲಿ ಮಾಡಿದ್ದಾರೆ’ ಎಂದು ದೂರಿದರು.

ಬಿ.ಎ ಓದಿದವರು, ಕಾನೂನು ಓದಿದವರೆಲ್ಲ ಬಜೆಟ್‌ ಮಂಡಿಸುವುದು ಮಾಮೂಲು ಎನಿಸಿಬಿಟ್ಟಿದೆ. ಅರ್ಥವ್ಯವಸ್ಥೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಆದರೂ ಅರ್ಥಶಾಸ್ತ್ರಜ್ಞರಂತೆ ಬಿಂಬಿಸಿಕೊಂಡು ಹೋಗುತ್ತಾರೆ. ಸಿದ್ದರಾಮಯ್ಯಗೆ ಇದೆಲ್ಲಾ ಅರ್ಥ ಆಗಲ್ಲ. ಕೆಲವೊಮ್ಮೆ ಸತ್ಯ ವಿಚಾರ ಗೊತ್ತಿದ್ದರೂ ಅದನ್ನು ಹೇಳುವುದಿಲ್ಲ. ನಾವು ಸಾಲ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿದರೆ, ಕಾಂಗ್ರೆಸ್‌ನವರು ಅವರ ಖಜಾನೆ ತುಂಬಿಸಲು ಬಳಸಿದ್ದಾರೆಎಂದು ಟೀಕಿಸಿದರು.

ADVERTISEMENT

ಹಿಜಾಬ್‌ ಬದಲು ಕಿತಾಬ್‌ ಹಿಡಿಯಿರಿ: ‘ಹಿಜಾಬ್‌ ಧರಿಸಬೇಕು ಎಂದು ಹಟ ಹಿಡಿಯುವರಲ್ಲಿ ನಿಮಗೆ ಹಿಜಾಬ್‌ ಬೇಕೇ, ಕಿತಾಬ್‌ (ಪುಸ್ತಕ) ಬೇಕೇ ಎಂದು ಪ್ರಶ್ನಿಸುವೆ. ಕಿತಾಬ್‌ ಹಿಂದೆ ಹೋದವರು ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ನಿರ್ಮಲಾ ಸಿತಾರಾಮನ್ ಆಗಿ ಹೆಸರು ಪಡೆದಿದ್ದಾರೆ. ಹಿಜಾಬ್‌ ಬೇಕೆಂದು ಕಿತಾಬ್‌ ಮರೆತು ಮಕ್ಕಳನ್ನು ಹೆರುವ ಯಂತ್ರವಾಗಿ ಉಳಿಯಬೇಡಿ. ವಿದ್ಯೆ ಕಲಿತು ಮುಖ್ಯವಾಹಿನಿಗೆ ಬಂದು ಸ್ವತಂತ್ರ ಜೀವನ ನಡಸುವಂತಾಗಬೇಕೆಂಬುದೇ ನಮ್ಮ ಉದ್ದೇಶ’ ಎಂದರು.

ಹಿಜಾಬ್‌ ವಿವಾದದಲ್ಲಿ ಸರ್ಕಾರ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದು ಸಾಕು. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಈಗಿನ ಹಿಜಾಬ್‌ ವಿವಾದದ ಹಿಂದೆ ಕೆಎಫ್‌ಡಿ, ಪಿಎಫ್‌ಐ ಸಂಘಟನೆಯ ಕೈವಾಡವಿದ್ದು, ಅವುಗಳನ್ನು ನಿಷೇಧಿಸಲಿಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.