ADVERTISEMENT

ಮೈಸೂರಿಗೆ ರಾಷ್ಟ್ರಪತಿ: ಸಿದ್ಧತೆಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:15 IST
Last Updated 22 ಆಗಸ್ಟ್ 2025, 4:15 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಮೈಸೂರು: ‘ರಾಷ್ಟ್ರಪತಿ ದ್ರೌಪದಿ ಮುರ್ಮು ಸೆ. 1ರಂದು ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್‌) ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ’ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಿದ ಅವರು, ‘ರಾಷ್ಟ್ರಪತಿಗಳ ವಾಸ್ತವ್ಯ, ಭದ್ರತೆಯಲ್ಲಿ ಲೋಪ ಆಗದಂತೆ ಎಚ್ಚರ ವಹಿಸಬೇಕು. ಅವರು ಸಂಚರಿಸುವ ರಸ್ತೆ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು. ಆಯಿಷ್‌ನಿಂದ ರಾಡಿಷನ್ ಬ್ಲೂ ಹೋಟೆಲ್‌ವರೆಗಿನ ರಸ್ತೆಗಳ ಸ್ವಚ್ಛತೆ ಮಾಡಬೇಕು. ಆಂಬ್ಯುಲೆನ್ಸ್ ಹಾಗೂ ತಜ್ಞ ವೈದ್ಯರ ಸೇವೆ ಒದಗಿಸಬೇಕು’ ಎಂದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿ.ಪಂ. ಸಿಇಒ ಎಸ್. ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸಿಫ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ಡಿಸಿಪಿ ಕೆ.ಎಸ್‌. ಸುಂದರ್ ರಾಜ್‌, ಆಯಿಷ್ ನಿರ್ದೇಶಕಿ ಡಾ. ಎಂ. ಪುಪ್ಪಾವತಿ ಉಪಸ್ಥಿತರಿದ್ದರು.

ADVERTISEMENT
ಮಾಧ್ಯಮಗಳಿಗೆ ನಿರ್ಬಂಧ
ರಾಷ್ಟ್ರಪತಿ ಅವರು ಪಾಲ್ಗೊಳ್ಳಲಿರುವ ಆಯಿಷ್‌ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ನಿರ್ಬಂಧ ವಿಧಿಸಲಾಗಿದೆ. ‘ಸ್ಥಳಾವಕಾಶದ ಕೊರತೆಯಿಂದ ಈ ನಿರ್ಧಾರ ಕೈಗೊಂಡಿದ್ದು ಕಾರ್ಯಕ್ರಮದ ನೇರ ಪ್ರಸಾರ ನೋಡಿ ವರದಿ ಮಾಡಿಕೊಳ್ಳಬಹುದು’ ಎಂದು ಜಿಲ್ಲಾಡಳಿತವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.