ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಂಧ ವಿದ್ಯಾರ್ಥಿ ಕಲ್ಪನಾ ಸಾಧನೆಗೆ ಪ್ರಧಾನಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 14:30 IST
Last Updated 30 ಮೇ 2022, 14:30 IST
ಕಲ್ಪನಾ
ಕಲ್ಪನಾ   

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 92 ಅಂಕ ಪಡೆದಿದ್ದಉತ್ತರಾಖಂಡದ ಅಂಧ ವಿದ್ಯಾರ್ಥಿನಿ ಕಲ್ಪನಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪ‍ಡಿಸಿದ್ದಾರೆ. ಅವರಿಗೆ ತರಬೇತಿ ನೀಡಿದ ಈಶ ಫೌಂಡೇಶನ್ ಸ್ವಯಂ ಸೇವಕರಾದ ಪ್ರೊ.ತಾರಾಮೂರ್ತಿ ಅವರನ್ನೂ ಪ್ರಶಂಸಿಸಿದ್ದಾರೆ.

ರೇಡಿಯೊ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನಲ್ಲಿ ಸಾಧನೆಯನ್ನು ಪ್ರಸ್ತಾಪಿಸಿರುವ ಮೋದಿ ಅವರು, ‘ಅನೇಕ ಭಾಷೆಗಳು, ಉಪಭಾಷೆ, ಲಿಪಿಗಳ ಶ್ರೀಮಂತ ದೇಶ ಭಾರತವಾಗಿದೆ. ದೇಶದ ಬಲ ವೈವಿಧ್ಯತೆಯೇ ಆಗಿದೆ. ಕಲ್ಪನಾ ಸಾಧನೆ ಇದಕ್ಕೆ ನಿದರ್ಶನ. ಏಕ ಭಾರತ ಶ್ರೇಷ್ಠ ಭಾರತ ಎಂಬ ಮಾತನ್ನು ಕಲ್ಪನಾ ಅವರ ಸಾಧನೆಯು ಧ್ವನಿಸುತ್ತದೆ. ವೈವಿಧ್ಯತೆಯೇ ನಮ್ಮನ್ನು ಒಂದು ಮಾಡುತ್ತದೆ’ ಎಂದಿದ್ದಾರೆ.

ಹಿಂದಿ, ಘರ್ವಾಲಿ ಭಾಷೆಯಷ್ಟೇ ಬರುತ್ತಿದ್ದ ಉತ್ತರಾಖಂಡದ ಉರ್ಗಮ್‌ ಕಣಿವೆಯ ಕಲ್ಪನಾ, ಖಾಸಗಿ ಅಭ್ಯರ್ಥಿಯಾಗಿ ಸ್ಕೈಬ್ಸ್‌ ನೆರವಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು 514 ಅಂಕ ಪಡೆದಿದ್ದರು.

ADVERTISEMENT

ಎಂಟನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ದೃಷ್ಟಿ ಕಳೆದುಕೊಂಡರು. ಡೆಹ್ರಾಡೂನ್‌ನ ಅಂಧರ ಶಾಲೆಯಲ್ಲಿ 1ನೇ ತರಗತಿಗೆ ಸೇರಿ 5ನೇ ತರಗತಿವರೆಗೆ ಓದಿದ್ದರು. ಈ ಸಂದರ್ಭದಲ್ಲಿ ಪ್ರೊ.ತಾರಾಮೂರ್ತಿ ಅವರು ಟ್ರೆಕ್ಕಿಂಗ್‌ ನಿಮಿತ್ತ ಉತ್ತರಾಖಂಡಕ್ಕೆ ತೆರಳಿದಾಗ ಈ ಬಾಲಕಿಯ ನಿವಾಸದಲ್ಲಿ ಉಳಿದುಕೊಂಡಿದ್ದರು.

ಪ್ರೊ.ತಾರಾಮೂರ್ತಿ ಮಾತನಾಡಿ, ‘ಬಾಲಕಿಯ ಪರಿಸ್ಥಿತಿ ತಿಳಿದು ಆಕೆಯನ್ನು ಮೈಸೂರಿಗೆ ಕರೆತಂದು ರಂಗರಾವ್‌ ಮೆಮೋರಿಯಲ್‌ ಅಂಧರ ಶಾಲೆಗೆ ಸೇರಿಸಿದೆ. 6, 7ನೇ ತರಗತಿ ಓದಿದಳು. ಅಷ್ಟರಲ್ಲಿ ಕೋವಿಡ್‌ ಬಂದು ಮಕ್ಕಳನ್ನು ಹಾಸ್ಟೆಲ್‌ನಿಂದ ತೆರವುಗೊಳಿಸಿದಾಗ ಮನೆಗೆ ಕರೆತಂದೆ. ಹಾಸ್ಟೆಲ್‌ನಲ್ಲಿದ್ದಾಗಲೇ ಕನ್ನಡ ಮಾತನಾಡುವುದನ್ನು ಕಲಿತಳು. ಎರಡು ವರ್ಷ ಕೋವಿಡ್‌ ಇದ್ದ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನೇರವಾಗಿ ಬರೆದಿದ್ದಳು. ಕಲ್ಪನಾಳನ್ನು ಪ್ರಧಾನಿ ಶ್ಲಾಘಿಸಿರುವುದು ಸಂತಸ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.