ADVERTISEMENT

‘ಪ್ರಧಾನಿಗಳೇ ಮಾತು ಸಾಕು, ಕೆಲಸ ಬೇಕು’

ಪಕೋಡ ಮಾರುವ ಮೂಲಕ ದಲಿತ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ, ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 1:55 IST
Last Updated 20 ಅಕ್ಟೋಬರ್ 2020, 1:55 IST
ನಿರುದ್ಯೋಗ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಪಕೋಡ ಮಾರುವ ಮೂಲಕ ಪ್ರತಿಭಟನೆ ನಡೆಸಿದರು (ಎಡಚಿತ್ರ). ಅರಮನೆ ಮಂಡಳಿ ಉಪನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು
ನಿರುದ್ಯೋಗ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಪಕೋಡ ಮಾರುವ ಮೂಲಕ ಪ್ರತಿಭಟನೆ ನಡೆಸಿದರು (ಎಡಚಿತ್ರ). ಅರಮನೆ ಮಂಡಳಿ ಉಪನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು   

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಭರವಸೆಯಂತೆ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು ಪಕೋಡ ಮಾರುವ ಮೂಲಕ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದಾಖಲೆಯ ನಿರುದ್ಯೋಗ ಸೃಷ್ಟಿಸಿದೆ ಎಂದು ಟೀಕಿಸಿದರು.

ADVERTISEMENT

ಉದ್ಯೋಗದ ಬಗ್ಗೆ ಕೇಳಿದರೆ ಗೃಹ ಸಚಿವ ಅಮಿತ್‌ ಶಾ ಅವರು ಪಕೋಡ ಮಾರಾಟ ಮಾಡಿ ಎಂಬ ಸಲಹೆ ನೀಡಿ ವಿದ್ಯಾರ್ಥಿ ಸಮುದಾಯವನ್ನು ಅವಮಾನಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳು ಮತ್ತು ಯುವಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ದೂರಿದರು.

ಮೈಸೂರು ವಿ.ವಿ. 100ನೇ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿರುವುದು ಸಂತಸದ ವಿಷಯ. ಆದರೆ ತಮ್ಮ ಇಡೀ ಅಧಿಕಾರದ ಅವಧಿಯಲ್ಲಿ ಕೇವಲ ಮಾತನಾಡುವುದನ್ನೇ ತಮ್ಮ ಸಾಧನೆಯನ್ನಾಗಿಸಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಆರ್‌.ಸಂದೇಶ್, ಟಿ.ಎಂ.ಕಾರ್ತಿಕ್‌, ದಿಲೀಪ್‌ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.

ಕಿರುಕುಳ ತಪ್ಪಿಸಿ: ಮೈಕ್ರೋಫೈನಾನ್ಸ್‌ ಮತ್ತು ಸಾಲ ನೀಡುವ ಸಂಘ ಸಂಸ್ಥೆಗಳಿಂದ ಮಹಿಳೆಯರಿಗೆ ಆಗುವ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಪರಿಷದ್‌ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹಲವು ಮಹಿಳೆಯರು ಮೈಕ್ರೋಫೈನಾನ್ಸ್‌ ಮತ್ತು ಸಂಘ ಸಂಸ್ಥೆಗಳಿದ ಸಾಲ ಪಡೆದಿದ್ದಾರೆ. ಆದರೆ ಕೊರೊನಾ ಕಾರಣ ಕಳೆದ ಆರು ತಿಂಗಳಿನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಸಾಲ ಮರುಪಾವತಿ ಮಾಡಲು ಆಗುತ್ತಿಲ್ಲ. ಆದರೆ ಸಂಘ ಸಂಸ್ಥೆಗಳು ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ಕಾಂಗ್ರೆಸ್‌ ಮುಖಂಡ ಎನ್‌.ಎಂ.ನವೀನ್‌ಕುಮಾರ್, ಎಂ.ರಾಜೇಶ್‌, ಪರಿಷದ್‌ ಅಧ್ಯಕ್ಷೆ ಶ್ವೇತಾ ಶೇಖರ್‌, ಜ್ಯೋತಿ, ಹೇಮಾವತಿ ಭಾಗವಹಿಸಿದ್ದರು.

ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ: ಮೈಸೂರು ಅರಮನೆ ಮಂಡಳಿಯಲ್ಲಿ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಟಿ.ಎಸ್‌.ಸುಬ್ರಮಣ್ಯ ವಿರುದ್ಧ ಕ್ರಮಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ಸದಸ್ಯರು ಪ್ರತಿಭಟನೆ ನಡೆಸಿದರು.

‘ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಈ ಹಿಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಡಳಿತ ತನಿಖೆಯ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟಿದ್ದೆವು. ಆದರೆ ಮಾತುಕೊಟ್ಟು 25 ದಿನಗಳು ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.

ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪದಾಧಿಕಾರಿಗಳಾದ ಕೆ.ವಿ.ದೇವೇಂದ್ರ, ದೇವರಾಜ, ತಳ್ಳೂರು ಸಂತೋಷ್, ಮಹೇಶ್‌, ಶಿವಮೂರ್ತಿ ಶಂಕರಪುರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.