ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ದೊಡ್ಡ ರಥೋತ್ಸವದ ಹಿನ್ನಲೆಯಲ್ಲಿ ಬೆಳ್ಳಿ ಗರುಡೋತ್ಸವ ಮಹಾ ಮಂಗಳಾರತಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.
ಇದೇ 23 ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಪ್ರತಿ ದಿನ ಆಲಯದಲ್ಲಿ ವಿವಿಧ ಉತ್ಸವಗಳು ನಡೆಯುತ್ತಿದ್ದು, ಮೇ 30ರತನಕ ಧಾರ್ಮಿಕ ಕೈಂಕರ್ಯಗಳು ಸಾಗಲಿವೆ. ಶನಿವಾರ ರಾತ್ರಿ ಹೂ ಚಪ್ಪರದ ತಳ ಭಾಗದಲ್ಲಿ ರಂಗನಾಥಸ್ವಾಮಿ ಮೂರ್ತಿಗೆ ಹೂ ಹಾರದಿಂದ ಸಿಂಗರಿಸಿ ಮೆರವಣಿಗೆ ಮಾಡಲಾಯಿತು.
‘ದೇವಾಲಯವನ್ನು ಬಣ್ಣಬಣ್ಣದ ವಿದ್ಯುತ್ ಬಲ್ಬ್‌ಗಳಿಂದ ಅಲಂಕರಿಸಲಾಗಿದೆ. ತಳಿರು ತೋರಣಗಳಿಂದ ಸಿಂಗಾರಗೊಂಡು ಮಂಟಪಗಳು ಕಂಗೊಳಿಸುತ್ತಿವೆ, ಅರವಟ್ಟಿಗೆ ಮತ್ತು ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿ ಸುಣ್ಣ ಬಳಿಯಲಾಗಿದೆ. ದಾಸೋಹ ಭವನ ಸಜ್ಜುಗೊಂಡಿದ್ದು, ಭಕ್ತರಿಗೆ ಪ್ರತಿದಿನ ಪ್ರಸಾದ ವಿತರಿಸಲಾಗುತ್ತಿದೆ. ದೊಡ್ಡ ರಥವು ಸಿದ್ಧಗೊಂಡಿದ್ದು, ಭಕ್ತರ ಪೂಜೆಗೆ ಅಣಿಗೊಳಿಸಲಾಗಿದೆ’ ಎಂದು ಇಒ ವೈ.ಎನ್.ಮೋಹನ್ ಕುಮಾರ್ ಹೇಳಿದರು.
‘ಸೋಮವಾರ ಹಗಲು ಪಲ್ಲಕ್ಕಿ ಉತ್ಸವ ಹಾಗೂ ಸಿಂಹವಾಹನ ಗಜೇಂದ್ರ ಮೋಕ್ಷ ಆಚರಣೆ ಪೂರ್ಣಗೊಳ್ಳಲಿದೆ. ಮಂಗಳವಾರ ಶುದ್ಧ ಪೌರ್ಣಮಿ 10.53ಕ್ಕೆ ಮಹಾ ರಥೋತ್ಸವಕ್ಕೆ ಚಾಲನೆ ಸಿಗಲಿದೆ. ಈ ಸಮಯ 10 ಸಾವಿರಕ್ಕೂ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇದೆ’ ಎನ್ನುತ್ತಾರೆ ದೇವಾಲಯದ ಪಾರುಪತ್ತೇಗಾರ ರಾಜು.
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥನ ದೇವಾಲಯದಲ್ಲಿ ಶನಿವಾರ ರಾತ್ರಿ ಪುಷ್ಪ ಮಂಟಪೋತ್ವದಲ್ಲಿ ರಂಗಸ್ವಾಮಿ ಉತ್ಸವ ಮೂರ್ತಿಯನ್ನು ಭಕ್ತರು ಮೆರವಣಿಗೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.