ADVERTISEMENT

ಸಿದ್ದರಾಮಯ್ಯ ವಿರುದ್ಧ ಆಧಾರ ರಹಿತ ಆರೋಪ: ಎಂ.ರಮೇಶ್

ತಿ.ನರಸೀಪುರ: ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾಧ್ಯಕ್ಷ ಎಂ.ರಮೇಶ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:12 IST
Last Updated 4 ಆಗಸ್ಟ್ 2024, 16:12 IST
ತಿ.ನರಸೀಪುರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಎಂ.‌ರಮೇಶ್ ಮಾತನಾಡಿದರು
ತಿ.ನರಸೀಪುರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಎಂ.‌ರಮೇಶ್ ಮಾತನಾಡಿದರು   

ತಿ.ನರಸೀಪುರ: ‘ಅಧಿಕಾರ ದಾಹವಿರುವ ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾಧ್ಯಕ್ಷ ಎಂ.ರಮೇಶ್ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಜನತೆಯ ಅಭಿವೃದ್ಧಿ ಚಿಂತನೆ ಇದೆ. ಆದರೆ ವಿರೋಧ ಪಕ್ಷದವರಿಗೆ ಅಧಿಕಾರವಿಲ್ಲದೇ ಕೂರಲು ಸಾಧ್ಯವಾಗದೇ ಜನರ ಅಭಿವೃದ್ಧಿ ಬಗ್ಗೆ ಚರ್ಚಿಸದೇ ವಾಲ್ಮೀಕಿ ಹಗರಣವನ್ನೆ ಮುಂದಿಟ್ಟು ಅಧಿವೇಶನದಲ್ಲೂ ಸಮಯ ಹಾಳು ಮಾಡಿದರು. ರಾಜ್ಯದೆಲ್ಲೆಡೆ ಪ್ರವಾಹ ಬಂದು ಸಾವು-ನೋವುಗಳಾಗಿವೆ. ಅದರ ಬಗ್ಗೆ ಕಾಳಜಿ ತೋರದೆ ಪಾದಯಾತ್ರೆ ನಡೆಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ ವರ್ಗದ ನಾಯಕರಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಅಧಿಕಾರ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯದಡಿ ಆಡಳಿತ ನೀಡಿ ಎಲ್ಲ ವರ್ಗದ ಜನರ ಆಶಾಕಿರಣವಾಗಿದ್ದಾರೆ. ಆದರೀಗ ಮುಖ್ಯಮಂತ್ರಿ ಜನಪ್ರಿಯತೆ ಸಹಿಸದ ವಿರೋಧ ಪಕ್ಷಗಳು ಅವರ ಮೇಲೆ ಆಧಾರ ರಹಿತವಾದ ಆರೋಪ ಮಾಡುತ್ತಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಅವರ ಹೆಸರನ್ನು ವಿನಾಕಾರಣ ತರುವ ಮೂಲಕ ಅವರಿಗೆ ಕಳಂಕ ತರುವ ಕೆಲಸ ಮಾಡಲು ಹೊರಟಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೈತ್ರಿ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ, ಬಿಜೆಪಿ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣಗಳು ನಡೆದಿವೆ’ ಎಂದು ಆರೋಪಿಸಿದರು.

ಪುರಸಭಾ ಸದಸ್ಯರಾದ ಬಾದಾಮಿ ಮಂಜು, ಮೆಡಿಕಲ್ ನಾಗರಾಜು, ತುಂಬಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮ ನಂಜಯ್ಯ, ಕೆ.ಎಸ್.‌ಗಣೇಶ್, ಎನ್.ಮಹೇಶ್,
ಎಂ.ಕೆ.ಸಹದೇವ, ಯುವ ಘಟಕದ ಅಧ್ಯಕ್ಷ ಲಿಂಗರಾಜು, ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್, ಟೌನ್ ಅಧ್ಯಕ್ಷ ಅಂದಾನಿ ಗೌಡ, ಮುಖಂಡರಾದ ಮಹದೇವ್ (ಚಿಳ್ಳು), ಯೋಗೇಶ್, ಸೋಮಣ್ಣ, ರವಿ, ಮಹದೇವಸ್ವಾಮಿ, ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.