ADVERTISEMENT

ಮಾದಕವಸ್ತು ಜಾಲದ ವಿರುದ್ಧ ಪ್ರತಿಭಟನೆ

ಕರ್ನಾಟಕ ಸೇನಾ ಪಡೆ ಕಾರ್ಯಕರ್ತರಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 12:01 IST
Last Updated 4 ಸೆಪ್ಟೆಂಬರ್ 2020, 12:01 IST
ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು
ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು   

ಮೈಸೂರು: ರಾಜ್ಯದಲ್ಲಿರುವ ಮಾದಕವಸ್ತು ಜಾಲವನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಎಲ್ಲೆಡೆ ಚಿತ್ರರಂಗದಲ್ಲಿ ಮಾತ್ರವೇ ಈ ಜಾಲ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಚಿತ್ರರಂಗಕ್ಕಿಂತ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದಲ್ಲಿ ಈ ಜಾಲದ ಅಸ್ತಿತ್ವ ಇದೆ ಎಂದು ಅವರು ಆರೋಪಿಸಿದರು.

‘ಮಾದಕವಸ್ತು ಜಾಲ ಒಂದು ಭಯೋತ್ಪಾದನೆ ಇದ್ದಂತೆ. ಇದು ನಮ್ಮ ರಾಷ್ಟ್ರ ವಿರೋಧಿ. ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿ, ಅವರನ್ನು, ಅವರ ಕುಟುಂಬಗಳನ್ನು ನಾಶ ಮಾಡುತ್ತದೆ. ಇದು ಬಾಂಬ್ ಹಾಕುವುದಕ್ಕೆ ಸಮ’ ಎಂದು ಅವರು ಖಂಡಿಸಿದರು.

ADVERTISEMENT

ಮಾದಕವಸ್ತುಗಳಿಂದ ಉಂಟಾಗುವ ಹಾನಿಯ ಕುರಿತು ಯುವಜನರಲ್ಲಿ ಸರ್ಕಾರ ಅರಿವು ಮೂಡಿಸಬೇಕು. ಪೋಷಕರೂ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಈ ಮೂಲಕ ಅವರು ಈ ಜಾಲಕ್ಕೆ ಸಿಲುಕದ ಹಾಗೆ ಮಾಡಬಹುದು ಎಂದು ಸಲಹೆ ನೀಡಿದರು.

ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯಬಾರದು. ಎಂತಹ ಪ್ರಭಾವಿಗಳ ಹಸ್ತಕ್ಷೇಪ ಇದ್ದರೂ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು. ಬುಡಸಮೇತ ಇದನ್ನು ಕಿತ್ತು ಬೀಸಾಡಬೇಕು ಎಂದು ಅವರು ಒತ್ತಾಯಿಸಿದರು.

‌ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜಸ್‌ ಲೋಕೇಶ್‌ಗೌಡ, ಮುಖಂಡರಾದ ಪಿ.ಶಾಂತರಾಜೇಅರಸ್, ಎಂ.ಬಿ.ಪ್ರಭುಶಂಕರ್, ಪಿ.ಪ್ರಜೀಶ್, ಸುಬ್ಬೇಗೌಡ, ಮೊಗಣ್ಣಾಚಾರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.