ADVERTISEMENT

ವಿವೇಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ಎನ್‌ಟಿಎಂ ಶಾಲೆಯ ಮುಂಭಾಗ ಬೃಹತ್ ಧರಣಿ, ರಸ್ತೆಯ ಒಂದು ಭಾಗದಲ್ಲಿ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 11:24 IST
Last Updated 24 ಸೆಪ್ಟೆಂಬರ್ 2021, 11:24 IST
ನಿರಂಜನಮಠದ ಆವರಣ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆಯ ಆವರಣದಲ್ಲಿ ವಿವೇಕ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಯುವಜನ ಸಾಂಸ್ಕೃತಿಕ ಕೇಂದ್ರ ನಿರ್ಮಿಸಬೇಕು ಎಂದು ನೂರಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶುಕ್ರವಾರ ಎನ್‌ಟಿಎಂ ಶಾಲೆಯ ಮುಂಭಾಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ನಿರಂಜನಮಠದ ಆವರಣ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆಯ ಆವರಣದಲ್ಲಿ ವಿವೇಕ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಯುವಜನ ಸಾಂಸ್ಕೃತಿಕ ಕೇಂದ್ರ ನಿರ್ಮಿಸಬೇಕು ಎಂದು ನೂರಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶುಕ್ರವಾರ ಎನ್‌ಟಿಎಂ ಶಾಲೆಯ ಮುಂಭಾಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು   

ಮೈಸೂರು: ನಿರಂಜನಮಠದ ಆವರಣ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆಯ ಆವರಣದಲ್ಲಿ ವಿವೇಕ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಯುವಜನ ಸಾಂಸ್ಕೃತಿಕ ಕೇಂದ್ರ ನಿರ್ಮಿಸಬೇಕು ಎಂದು ನೂರಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಎನ್‌ಟಿಎಂ ಶಾಲೆಯ ಮುಂಭಾಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಸೇರಿದ ಸುತ್ತಮುತ್ತಲ ಕಾಲೇಜುಗಳು ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನಾರಾಯಣಶಾಸ್ತ್ರಿ ರಸ್ತೆಯ ಒಂದು ಭಾಗದಲ್ಲಿ ಕುಳಿತು, ಘೋಷಣೆಗಳನ್ನು ಕೂಗಿದರು. ಇದರಿಂದ ಸುಮಾರು ಒಂದು ಗಂಟೆ ಕಾಲ ರಸ್ತೆಯ ಒಂದು ಬದಿಯ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ನ್ಯಾಯಾಲಯದ ಆದೇಶ ಪಾಲಿಸಿರಿ, ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡಿ ಎಂಬ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದರು.

ADVERTISEMENT

ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಶ್ರೀರಾಮ ಅಂಗೀರಸ ಮಾತನಾಡಿ, ‘ವಿವೇಕ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರದಿಂದ ಇಲ್ಲಿ ವಿಶ್ವದರ್ಜೆಯ ಗ್ರಂಥಾಲಯ ಸ್ಥಾಪನೆಯಾಗುತ್ತದೆ. ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಇಲ್ಲಿ ರೂಪಿಸಲಾಗುತ್ತದೆ. ಇದರಿಂದ ಸುತ್ತಮುತ್ತ ಇರುವ ಸುಮಾರು 8ರಿಂದ 10 ಕಾಲೇಜುಗಳ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ಇಲ್ಲಿಗೆ ಬಂದು ತರಬೇತಿ ಪಡೆಯಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ಸಂಘಟನೆಯ ಹಿರಿಯ ಕಾರ್ಯಕರ್ತ ಎನ್.ಆರ್.ಮಂಜುನಾಥ್ ಮಾತನಾಡಿ, ‘ವಿವೇಕಾನಂದರ ಜೀವನ ಸಂದೇಶಗಳನ್ನು ಇಲ್ಲಿ ಯುವಜನರಿಗೆ ಮನವರಿಕೆ ಮಾಡಿಕೊಡಬಹುದು. ಬೇರೆಲ್ಲೋ ಇಂತಹ ಕೇಂದ್ರ ತೆರೆಯುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗದು. ಕಾಲ್ನಡಿಗೆಯಲ್ಲಿ ವಿದ್ಯಾರ್ಥಿಗಳು ಬರಬಹುದಾದ ಸ್ಥಳ ಇದಾಗಿದೆ. ನ್ಯಾಯಾಲಯವೂ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಇಂತಹ ಸಂದರ್ಭದಲ್ಲಿ ವಿರೋಧಿಸುವುದು ಸರಿಯಲ್ಲ’ ಎಂದು ತಿಳಿಸಿದರು.

ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಬಸವೇಶಕೋರಿ, ಜಿಲ್ಲಾ ಸಂಚಾಲಕ ಮಲ್ಲಪ್ಪ, ಕಾರ್ಯಕರ್ತರಾದ ಕಿರಣ, ಶಿವು, ಶ್ರೇಯಸ್, ಜೀವನ್, ನಮಿತಾ, ನಾಗಶ್ರೀ, ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.