ADVERTISEMENT

ಜಿಲ್ಲೆಗೆ ಈ ಬಾರಿಯೂ 15ನೇ ಸ್ಥಾನ

ಪಿಯು ಫಲಿತಾಂಶ: ಒಟ್ಟು ಶೇ 67.98 ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:45 IST
Last Updated 14 ಜುಲೈ 2020, 17:45 IST

ಮೈಸೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 67.98 ಫಲಿತಾಂಶ ದಾಖಲಿಸಿರುವ ಮೈಸೂರು ಜಿಲ್ಲೆಯು ರಾಜ್ಯದಲ್ಲಿ 15ನೇ ಸ್ಥಾನ ಗಳಿಸಿದೆ. ಕಳೆದ ಬಾರಿಯೂ ಇದೇ ಸ್ಥಾನದಲ್ಲಿತ್ತು.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 68.55) ಈ ಬಾರಿ ಶೇಕಡವಾರು ಫಲಿತಾಂಶ ಕಡಿಮೆಯಾಗಿದೆ. ರಾಜ್ಯದಲ್ಲಿ ಟಾಪ್‌ 10 ರಲ್ಲಿ ಕಾಣಿಸಿಕೊಳ್ಳಬೇಕೆಂಬ ಮೈಸೂರು ಜಿಲ್ಲೆಯ ಕನಸು ಈ ಬಾರಿಯೂ ಈಡೇರಲಿಲ್ಲ. ಮೈಸೂರು ಜಿಲ್ಲೆ 2016 ರಲ್ಲಿ 11ನೇ ಸ್ಥಾನ, 2017 ರಲ್ಲಿ 14ನೇ ಸ್ಥಾನ ಮತ್ತು 2018 ರಲ್ಲಿ 17ನೇ ಸ್ಥಾನ ಪಡೆದುಕೊಂಡಿತ್ತು.

ಜಿಲ್ಲೆಯಲ್ಲಿ ಈ ಸಲ 28,120 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆದಿದ್ದು, 19,116 ಮಂದಿ ಉತ್ತೀರ್ಣರಾಗಿದ್ದಾರೆ. ನಿರೀಕ್ಷೆಯಂತೆಯೇ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 12,084 ಬಾಲಕಿಯರು ಪಾಸಾಗಿದ್ದು, ಶೇ 68.95 ಫಲಿತಾಂಶ ದಾಖಲಾಗಿದೆ. 8,743 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ 52.01 ಫಲಿತಾಂಶ ಮೂಡಿಬಂದಿದೆ.

ADVERTISEMENT

ನಗರ ಪ್ರದೇಶದಲ್ಲಿ 24,066 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 16,917 (ಶೇ 70.29) ಮಂದಿ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಬರೆದ 4,054 ವಿದ್ಯಾರ್ಥಿಗಳಲ್ಲಿ 2,199 (ಶೇ 54.24) ಮಂದಿ ತೇರ್ಗಡೆಯಾಗಿದ್ದಾರೆ.

ಪುನರಾವರ್ತಿತ ಅಭ್ಯರ್ಥಿಗಳು 4,668 ಮಂದಿ ಇದ್ದು, 1,349 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 1,523 ಖಾಸಗಿ ಅಭ್ಯರ್ಥಿಗಳಲ್ಲಿ 362 ಮಂದಿ ಮಾತ್ರ ತೇರ್ಗಡೆಯಾಗಿದ್ದಾರೆ.

ಎಲ್ಲ ಪ್ರಯತ್ನ ನಡೆಸಿದ್ದೆವು: ‘ಮೈಸೂರು ಜಿಲ್ಲೆಯಲ್ಲಿ ಫಲಿತಾಂಶವನ್ನು ಉತ್ತಮಗೊಳಿಸಲು ಎಲ್ಲ ಪ್ರಯತ್ನ ನಡೆಸಿದ್ದೆವು. ಇದಕ್ಕಾಗಿ ಉಪನ್ಯಾಸಕರಿಗೆ ಹಲವು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಾಠ– ಪ್ರವಚನದಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಆದರೂ ನಾವು ನಿರೀಕ್ಷಿಸಿದಷ್ಟು ಫಲಿತಾಂಶ ಬರಲಿಲ್ಲ’ ಎಂದು ಡಿಡಿಪಿಯು ಜಿ.ಆರ್.ಗೀತಾ ತಿಳಿಸಿದರು.

‘ಇಂಗ್ಲಿಷ್‌ ಪರೀಕ್ಷೆಯು ಕೊರೊನಾ ಲಾಕ್‌ಡೌನ್‌ನಿಂದಾಗಿ ತಡವಾಗಿ ನಡೆಯಿತು. ಆದರೂ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಸೌಲಭ್ಯ ಕಲ್ಪಿಸಿದ್ದೆವು. ಈ ಬಾರಿ ಕಲಾ ವಿಭಾಗದಲ್ಲಿ ಕಡಿಮೆ ಫಲಿತಾಂಶ ಬಂದ ಕಾರಣ ಶೇಕಡವಾರು ಪ್ರಮಾಣದಲ್ಲಿ ಕುಸಿತ ಕಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.