ADVERTISEMENT

ಸಂಗೀತ ಮಳೆಯಲ್ಲಿ ಮಿಂದ ಜನರು; ಡಾ. ಶಮಿತಾ ಮಲ್ನಾಡ್‌ ಗಾಯನ ಮೋಡಿ

ಘಜಲ್‌ಗೆ ತಲೆದೂಗಿದ ಪ್ರೇಕ್ಷಕರು: ಡಾ. ಶಮಿತಾ ಮಲ್ನಾಡ್‌ ಗಾಯನ ಮೋಡಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 7:26 IST
Last Updated 11 ಅಕ್ಟೋಬರ್ 2021, 7:26 IST
ಅರಮನೆ ವೇದಿಕೆಯಲ್ಲಿ ಭಾನುವಾರ ಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್ ತಂಡವು ಮಿಶ್ರ ವಾದ್ಯ ಗಾಯನ ಪ್ರಸ್ತುತಪಡಿಸಿತು
ಅರಮನೆ ವೇದಿಕೆಯಲ್ಲಿ ಭಾನುವಾರ ಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್ ತಂಡವು ಮಿಶ್ರ ವಾದ್ಯ ಗಾಯನ ಪ್ರಸ್ತುತಪಡಿಸಿತು   

ಮೈಸೂರು: ಅರಮನೆ ವೇದಿಕೆಯಲ್ಲಿ ಭಾನುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಬಂದ ಪ್ರೇಕ್ಷಕರಿಗೆ ಮಳೆಯಿಂದ ನಿರಾಸೆಯಾಗಲಿಲ್ಲ. ಮಳೆ ಬಂದರೆ ಅಡ್ಡಿಯಾಗದಂತೆ ವೇದಿಕೆಯ ಪಕ್ಕದಲ್ಲೇ ನಿರ್ಮಿಸಿದ್ದ ಚಾವಣಿ ಸಹಿತ ವೇದಿಕೆಯಲ್ಲಿ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಸಂಜೆ 5ರ ನಂತರ ಬಿರುಸು ಪಡೆದ ಮಳೆಯಲ್ಲೇ ನೆನೆದು ವೇದಿಕೆಯತ್ತ ಪ್ರೇಕ್ಷಕರು ಧಾವಿಸಿ ಸಂಗೀತದ ಮಳೆಯಲ್ಲಿ ಮಿಂದರು. ಬೆಂಗಳೂರಿನ ಅಮೋಘವರ್ಷ ಡ್ರಮ್ಸ್‌ ಕಲೆಕ್ಟಿವ್‌ ತಂಡವು 25 ವಿವಿಧ ವಾದ್ಯಗಳಿಂದ ಪ್ರಸ್ತುತಪಡಿಸಿದ ಮಿಶ್ರ ವಾದ್ಯ ಗಾಯನವು ಮೋಡಿ ಮಾಡಿತು. ಇದರಲ್ಲಿ ಶಾಸ್ತ್ರೀಯ, ಪಾಶ್ಚಾತ್ಯ ಹಾಗೂ ಜಾನಪದ ಸಂಗೀತ ಪರಿಕರಗಳಿಂದ ಹೊಮ್ಮಿದ ಪ್ಯೂಷನ್‌ ಸಂಗೀತ ಜನರ ತಲೆದೂಗಿಸಿತು.

ಅಮಿತ್‌ ನಾಡಿಗರ ಕೊಳಲಿನ ನಾದದ ವೇಗಕ್ಕೆ ತಾಳವಾದ್ಯಗಳ ಹಿಮ್ಮೇಳ, ಅಮೋಘ ವರ್ಷ ಅವರ ಡ್ರಮ್ಸ್‌ ಕೇಳುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಅರೆಕ್ಷಣವು ಕಣ್ಣು ಮಿಟುಕಿಸದಂತೆ ಎಲ್ಲ ವಾದ್ಯಕಾರರು ತಮ್ಮತ್ತ ಸೆಳೆಯುತ್ತಿದ್ದರು. ಮುತ್ತುಸ್ವಾಮಿ ದೀಕ್ಷಿತರ ಕಲ್ಯಾಣಿ ರಾಗದ ‘ಶಿವಕಾಮೇಶ್ವರಿ’ ಕೃತಿಯನ್ನು ವಾದ್ಯಕಾರರು ನುಡಿಸುತ್ತಿದ್ದರೆ, ಸುರಿಯುತ್ತಿದ್ದ ಸೋನೆ ಮಳೆಯು ಭಾವ–ಭಕುತಿಯನ್ನು ಸಿಂಚನ ಮಾಡುತ್ತಿದೆ ಎಂಬಂತೆ ಭಾಸವಾಗುತ್ತಿತ್ತು.

ADVERTISEMENT

ಘಜಲ್‌ ಮೋಡಿ!: ನಗರದ ಶಾಂತಲಾ ವಟ್ಟಂ ಮತ್ತು ತಂಡವು ಘಜಲ್‌ ಗಾಯನ ಪ್ರಸ್ತುತಪಡಿಸಿತು. ಪಾಕಿಸ್ತಾನದ ಕವಿ ಫಯಾಜ್‌ ಹಶ್ಮಿ ಅವರ ‘ಆಜ್‌ ಜಾನೇ ಕಿ ಝಿದ್‌ ನ ಕರೊ’ ಘಜಲ್‌– ಪ್ರೀತಿಗೆ ದೇಶ–ಭಾಷೆ ಗಡಿಗಳು ಇಲ್ಲ ಎಂದು ಸಾರಿದರೆ, ಗುಲಾಂ ಆಲಿ ಸಂಯೋಜಿಸಿದ ‘ಚುಪ್ಕೆ ಚುಪ್ಕೆ ರಾತ್ ದಿನ್’ ಕೇಳುಗರನ್ನು ಭಾವಪರವಶವಾಗಿಸಿತು. ‘ಧಮಾ ಧಂ ಮಸ್ತ್‌ ಖಲಂದರ್‌’ ಘಜಲ್‌ ತಲೆದೂಗಿಸಿತು. ಶಮಿತಾ ಮಲ್ನಾಡ್‌ ಮತ್ತು ತಂಡ ಪ್ರಸ್ತುತ‍ಡಿಸಿದ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮ ಜನರನ್ನು ಸೆಳೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್‌, ಅರಣ್ಯ ವಸತಿ ಹಾಗೂ ವಿಹಾರಧಾಮ ಸಂಸ್ಥೆ ಅಧ್ಯಕ್ಷ ಅಪ್ಪಣ್ಣ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್‌ ಅವರು ಕಲಾವಿದರನ್ನು
ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.