ADVERTISEMENT

ಕದಂಬ 75: ಅಭಿನಂದನೆಗಳ ಮಹಾಪೂರ

ಕದಂಬ 75 ಚಿತ್ರ ಸಂಪುಟ–ರಂಗಸಿಂಧು ಕದಂಬ ಸಾಕ್ಷ್ಯಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 9:17 IST
Last Updated 25 ಫೆಬ್ರುವರಿ 2020, 9:17 IST
ರಂಗಕರ್ಮಿ ರಾಜಶೇಖರ ಕದಂಬ 75 ಅಭಿನಂದನಾ ಸಂಭ್ರಮ ಸಮಾರಂಭದಲ್ಲಿ ಕನಕರತ್ನ–ರಾಜಶೇಖರ ಕದಂಬ ದಂಪತಿಯನ್ನು ಅಭಿನಂದಿಸಲಾಯಿತು
ರಂಗಕರ್ಮಿ ರಾಜಶೇಖರ ಕದಂಬ 75 ಅಭಿನಂದನಾ ಸಂಭ್ರಮ ಸಮಾರಂಭದಲ್ಲಿ ಕನಕರತ್ನ–ರಾಜಶೇಖರ ಕದಂಬ ದಂಪತಿಯನ್ನು ಅಭಿನಂದಿಸಲಾಯಿತು   

ಮೈಸೂರು: ರಂಗಕರ್ಮಿ ರಾಜಶೇಖರ ಕದಂಬ 75 ಅಭಿನಂದನಾ ಸಂಭ್ರಮ ಸಮಾರಂಭ ನಗರದ ಕಿರು ರಂಗಮಂದಿರದಲ್ಲಿ ಸೋಮವಾರ ಮುಸ್ಸಂಜೆ ಅದ್ದೂರಿಯಾಗಿ ನಡೆಯಿತು.

ಕದಂಬರ ಗೆಳೆಯರು, ಒಡನಾಡಿಗಳು, ಅಭಿಮಾನಿಗಳು ಸೇರಿದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸಂಘ–ಸಂಸ್ಥೆಗಳು, ಸಂಘಟನೆಗಳು ರಾಜಶೇಖರ ದಂಪತಿ ಅಭಿನಂದಿಸಿದರು. ಹತ್ತಾರು ಹಾರಗಳು, ವಿವಿಧ ನಮೂನೆಯ ಹಲವು ಪೇಟ ಕದಂಬ ದಂಪತಿಯ ಕೊರಳು, ತಲೆಯನ್ನು ಅಲಂಕರಿಸಿದವು. ಸ್ಮರಣಿಕೆ ಕೈ ತುಂಬಿದವು. ಹಣ್ಣಿನ ಬುಟ್ಟಿಗಳು ರಾಶಿಯಾದವು.

ಹಿರಿಯರು ಇನ್ನಷ್ಟು ಕಾಲ ಸುಖ, ಶಾಂತಿ ಸಮೃದ್ಧಿಯಿಂದ ಬದುಕಿ ಎಂದು ಹಾರೈಸಿದರೆ, ಕಿರಿಯರು ಆಶೀರ್ವಾದ ಪಡೆದರು. ಇದೇ ಸಂದರ್ಭ ಕದಂಬ 75 ಚಿತ್ರ ಸಂಪುಟ, ರಂಗಸಿಂಧು ಕದಂಬ ಸಾಕ್ಷ್ಯಚಿತ್ರ ಬಿಡುಗಡೆಗೊಂಡವು. ರಾಜಶೇಖರ ಕದಂಬ ಕುಟುಂಬ ವರ್ಗವೂ ಈ ಸಮಾರಂಭಕ್ಕೆ ಸಾಕ್ಷಿಯಾಯ್ತು.

ADVERTISEMENT

ರಂಗತಜ್ಞ ಪ್ರೊ.ಸಿ.ವಿ.ಶ್ರೀಧರಮೂರ್ತಿ ಮಾತನಾಡಿ ‘ರಾಜಶೇಖರ ಕದಂಬ ಹವ್ಯಾಸಿ ರಂಗಭೂಮಿಯ ಸುವರ್ಣ ಸ್ತಂಭ. ಅಪ್ಪಟ ಗ್ರಾಮೀಣ ಪ್ರತಿಭೆ. ಅಜಾತಶತ್ರು. ಹೃದಯವಂತ. ಮೈಸೂರಿನ ಹೆಮ್ಮೆ’ ಎಂದು ಬಣ್ಣಿಸಿದರು.

‘ಬುದ್ದಿವಂತರು, ಬುದ್ದಿಜೀವಿಗಳಿಂದಲೇ ಇಂದು ಆಗಬಾರದ ಅನಾಹುತ ಆಗುತ್ತಿವೆ. ನಮಗೆ ಬುದ್ದಿವಂತರು ಬೇಕಿಲ್ಲ. ರಾಜಶೇಖರ ಕದಂಬ ಅವರಂತಹ ಹೃದಯವಂತರು ಬೇಕಿದೆ’ ಎಂದು ಹೇಳಿದರು.

ಕಲಾವಿದ ಮಂಡ್ಯ ರಮೇಶ್‌ ಮಾತನಾಡಿ ‘ರಾಜಶೇಖರ ಕದಂಬ ಅದ್ಭುತ ಸಂಘಟಕರು. 75ರ ಹರೆಯದಲ್ಲೂ ಲವಲವಿಕೆಯಿಂದ ಸಂಘಟನೆಯಲ್ಲಿ ತೊಡಗಿಕೊಂಡವರು. ಕಲೆಯಲ್ಲಿ ಯಾವ ರೀತಿ ವ್ಯವಹಾರ ಮಾಡಬೇಕು ಎಂಬುದನ್ನು ಕರಗತ ಮಾಡಿಕೊಂಡವರು. ಸಂಘಟನೆಯಲ್ಲಿ ಕೊಂಚ ತೊಂದರೆಯಾದರೂ ನಾನು ಮೊದಲು ಸಂಪರ್ಕಿಸುವುದು ಕದಂಬ ಅವರನ್ನೇ’ ಎಂದು ಹೇಳಿದರು.

‘ಕದಂಬ ಅವರ ದಾಖಲೀಕರಣವನ್ನು ಪ್ರತಿಯೊಬ್ಬರೂ ಕಲಿಯಬೇಕು. ರಂಗಭೂಮಿಯ ಕಲಾವಿದರು ಕುಟುಂಬಸ್ಥರಾಗಿರುವುದು ಅಪರೂಪ. ಹಿರಣ್ಣಯ್ಯ ನಂತರ ಅಂತಹ ಕುಟುಂಬ ಪ್ರೀತಿ ಹೊಂದಿದವರು ರಾಜಶೇಖರ ಕದಂಬ. ಇಂದಿನ ತಲ್ಲಣ–ಆತಂಕದ ನಡುವೆ ಸಮೃದ್ಧ ಬದುಕು ಕಂಡುಕೊಂಡಿದ್ದಾರೆ’ ಎಂದರು.

ಪ್ರೊ.ನಿರಂಜನ ವಾನಳ್ಳಿ ಕನಕರತ್ನ–ರಾಜಶೇಖರ ಕದಂಬ ದಂಪತಿ ಅಭಿನಂದಿಸಿ ಮಾತನಾಡಿದರು. ರಂಗ ನಿರ್ದೇಶಕ ಪ್ರೊ.ಎಚ್‌.ಎಸ್‌.ಉಮೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಮಡ್ಡಿಕೆರೆ ಗೋಪಾಲ್, ಎಸ್‌.ನಾಗರಾಜ್, ಮೂಗೂರು ನಂಜುಂಡಸ್ವಾಮಿ ಮತ್ತಿತರರಿದ್ದರು.

ಕನ್ನಡ ಸಾಹಿತ್ಯ ಕಲಾಕೂಟದ ಎಂ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಯಪ್ಪ ಹೊನ್ನಾಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.