ಮೈಸೂರು: ಇಲ್ಲಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಎಂಡಿಎ) ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಪ್ರಭಾರ ಆಯುಕ್ತರನ್ನಾಗಿ ಕೆ.ಆರ್. ರಕ್ಷಿತ್ ಅವರನ್ನು ನೇಮಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಈಚೆಗಷ್ಟೇ ರಾಜ್ಯ ಸರ್ಕಾರವು ಎಂಡಿಎ ರಚನೆ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ ಈ ನೇಮಕಾತಿ ಆದೇಶ ಹೊರಬಿದ್ದಿದೆ. ರಕ್ಷಿತ್ ಪ್ರಸ್ತುತ ಮೈಸೂರು ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2014ರ ಕೆಎಎಸ್ ಬ್ಯಾಚ್‌ನ ಅಧಿಕಾರಿಯಾದ ರಕ್ಷಿತ್ ಇದಕ್ಕೂ ಮುನ್ನ ಸಕಲೇಶಪುರ, ಹರಿಹರ ಹಾಗೂ ಮೈಸೂರು ತಹಶೀಲ್ದಾರ್ ಆಗಿ ಹಾಗೂ ಬಿಬಿಎಂಪಿ ಸಹಾಯಕ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಆರೋಪ: ‘ಮುಡಾದಲ್ಲಿನ (ಈಗಿನ ಎಂಡಿಎ) ನಿವೇಶನಗಳ ಹಂಚಿಕೆ ಪ್ರಕರಣವು ಲೋಕಾಯುಕ್ತ ತನಿಖೆಯಲ್ಲಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಿತ್ ಅವರನ್ನು ಹಿಂಬಾಗಿಲಿನ ಮೂಲಕ ಆಯುಕ್ತರ ಸ್ಥಾನದಲ್ಲಿ ಕೂರಿಸಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.