ADVERTISEMENT

ರಂಗಚಟುವಟಿಕೆಯಿಂದ ಮಾನಸಿಕ ನೆಮ್ಮದಿ: ಸಿ.ಎಸ್.ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 14:56 IST
Last Updated 28 ಸೆಪ್ಟೆಂಬರ್ 2018, 14:56 IST
ರಂಗಪ್ರಭ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ (ಕುಳಿತವರು, ಎಡದಿಂದ) ಸುಬ್ಬೇಗೌಡ, ಮಳಲಿ ವಸಂತಕುಮಾರ್, ಶಿವರಾಜ್ ಕೆ.ಆರ್.ಪೇಟೆ ಮತ್ತು ಎಚ್.ಎಸ್.ಗೋವಿಂದೇಗೌಡ ಅವರನ್ನು ಸನ್ಮಾನಿಸಲಾಯಿತು. ಸಚಿವ ಸಿ.ಎಸ್‌.ಪುಟ್ಟರಾಜು, ಎಚ್‌.ವಿ.ಗಣೇಶ್, ಸಿ.ಸಿದ್ದಲಿಂಗೇಗೌಡ ಇದ್ದಾರೆ
ರಂಗಪ್ರಭ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ (ಕುಳಿತವರು, ಎಡದಿಂದ) ಸುಬ್ಬೇಗೌಡ, ಮಳಲಿ ವಸಂತಕುಮಾರ್, ಶಿವರಾಜ್ ಕೆ.ಆರ್.ಪೇಟೆ ಮತ್ತು ಎಚ್.ಎಸ್.ಗೋವಿಂದೇಗೌಡ ಅವರನ್ನು ಸನ್ಮಾನಿಸಲಾಯಿತು. ಸಚಿವ ಸಿ.ಎಸ್‌.ಪುಟ್ಟರಾಜು, ಎಚ್‌.ವಿ.ಗಣೇಶ್, ಸಿ.ಸಿದ್ದಲಿಂಗೇಗೌಡ ಇದ್ದಾರೆ   

ಮೈಸೂರು: ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ ಕಾಣಬೇಕೆಂದರೆ ಎಲ್ಲರೂ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಂಗಪ್ರಭ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಒತ್ತಡ, ಜಿಜ್ಞಾಸೆಗಳೇ ತುಂಬಿವೆ. ರಂಗಕಲಾವಿದರಿಂದ ಮಾತ್ರ ಒತ್ತಡ ದೂರಮಾಡಲು ಸಾಧ್ಯ. ಮನುಷ್ಯ ಮಾನಸಿಕವಾಗಿ ಸ್ಥಿತಿವಂತನಾಗಬೇಕಾದರೆ ಕಲೆ, ಸಾಹಿತ್ಯದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ರಂಗಕಲಾ ಕ್ಷೇತ್ರದಲ್ಲಿನ ಶಕ್ತಿ ಅಪಾರವಾದುದು ಎಂದು ಹೇಳಿದರು.

ADVERTISEMENT

ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಪ್ರಯತ್ನಿಸಬೇಕು. ಆ ಪ್ರಯತ್ನ ನಿರಂತರವಾಗಿರಬೇಕು. ರಂಗಪ್ರಭ ಸಾಂಸ್ಕೃತಿಕ ವೇದಿಕೆ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಹೆಸರು ಗಳಿಸಲಿ ಎಂದರು.

ಸಾಹಿತಿ ಮಳಲಿ ವಸಂತಕುಮಾರ್ ಮಾತನಾಡಿ, ಕಲೆಯ ಹೊರತು ಬೇರಾವುದೂ ಹೆಚ್ಚು ಸಂತಸ ಉಂಟುಮಾಡುವುದಿಲ್ಲ. ನಾಟಕ ಕಲೆ ನಮ್ಮ ಮನಸ್ಸಿಗೆ ರೋಮಾಂಚನ ಉಂಟುಮಾಡುತ್ತದೆ. ಪಂಪ, ರನ್ನ ತಮ್ಮ ಮಹಾಕಾವ್ಯಗಳಲ್ಲಿ ವೀರ ರಸದಿಂದಲೇ ಜನರ ಮನಗೆದ್ದಿದ್ದಾರೆ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ್ ಮಾತನಾಡಿ, ಆಧುನಿಕ ಜೀವನದ ಜಂಜಾಟದಲ್ಲಿ ಯಾರಿಗೂ ರಂಗಚಟುವಟಿಕೆ ಮೇಲೆ ಗಮನವಿಡಲು ಸಮಯ ಸಿಗುತ್ತಿಲ್ಲ. ನಿವೃತ್ತಿ ಹೊಂದಿದ ಬಳಿಕವಾದರೂ ಕಲೆ, ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಆದರೆ, ಇಂದು ಹಲವರು ನಿವೃತ್ತಿಯ ನಂತರವೂ ತಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಬಗ್ಗೆ ಲೆಕ್ಕ ಹಾಕುತ್ತಾ ಕುಳಿತುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ರೈತ ಸುಬ್ಬೇಗೌಡ, ರಂಗಸಾಹಿತ್ಯ ಪ್ರಕಾಶಕ ಎಚ್.ಎಸ್.ಗೋವಿಂದೇಗೌಡ, ಮಳಲಿ ವಸಂತಕುಮಾರ್, ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಬಳಿಕ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.

ವೇದಿಕೆಯ ಅಧ್ಯಕ್ಷ ಎಚ್.ವಿ.ಗಣೇಶ್, ನಿವೃತ್ತ ಡಿವೈಎಸ್‌ಪಿ ಎಚ್.ಎಲ್.ಶಿವಬಸಪ್ಪ, ನಿವೃತ್ತ ಎಂಜಿನಿಯರ್ ಸಂಗಾಪುರ ನಾಗರಾಜ್, ಕರ್ನಾಟಕ ನಾಟಕ ಅಕಾಡೆಮಿ ನಿವೃತ್ತ ರಿಜಿಸ್ಟ್ರಾರ್ ಎ.ಎಸ್.ನಾಗರಾಜ್, ಅಕಾಡೆಮಿ ಸದಸ್ಯ ಹೊನ್ನನಾಯಕ, ನಾಟಕ ನಿರ್ದೇಶಕ ರಾಜಪ್ಪ ಕಿರಗಸೂರು, ವೇದಿಕೆ ಖಜಾಂಚಿ ಕೆ.ಬಿ.ಬೋರೇಗೌಡ, ಕಾರ್ಯದರ್ಶಿ ಸಿದ್ದಲಿಂಗೇಗೌಡ, ಬಸವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.