ADVERTISEMENT

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 4:51 IST
Last Updated 9 ಫೆಬ್ರುವರಿ 2019, 4:51 IST

‌ಮೈಸೂರು: ನಗರದ 20 ವರ್ಷದ ಯುವತಿ ಮೇಲೆ ನಾಲ್ವರು ಯುವಕರು ಭಾನುವಾರ ರಾತ್ರಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಗರದ ಪೊಲೀಸ್ ಠಾಣೆಯೊಂದರಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಭಾನುವಾರ ರಾತ್ರಿ ಆಲನಹಳ್ಳಿ ಬಳಿ ರಸ್ತೆ ಬದಿಯಲ್ಲಿ ಉಪಾಹಾರ ಸೇವಿಸಿದ ನಂತರ ಯುವತಿಯು ಕಳೆದ ಮೂರು ತಿಂಗಳ ಹಿಂದಷ್ಟೆ ಪರಿಚಯವಾಗಿದ್ದ ಕಾರು ಚಾಲಕ ಚಿರಾಗ್‌ ಎಂಬಾತನಿಗೆ ಫೋನ್‌ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಕೋರಿದ್ದಾರೆ.

ಈ ವೇಳೆ ಬಂದ ಚಿರಾಗ್, ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಕೊಳ್ಳೇಗಾಲದ ಕಡೆಗೆ ಹೋಗುವ ರಸ್ತೆಯಲ್ಲಿ ಅರ್ಧ ಕಿ.ಮೀ ಹೋಗಿದ್ದಾನೆ. ನಂತರ ಇತರ ಮೂವರನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಮುಂದೆ ನಿರ್ಜನ ಪ್ರದೇಶವೊಂದರಲ್ಲಿ ಯುವತಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಆಟೊ ಮೂಲಕ ಯುವತಿ ಮನೆ ಸೇರಿದ್ದಾರೆ.

ADVERTISEMENT

ದೂರು ಕೊಡುವುದು ಬೇಡ ಎಂದು ಯುವತಿ ಪೋಷಕರು ಹೇಳಿದ್ದರು. ಆದರೆ, ಗೆಳತಿಯೊಬ್ಬರು ದೂರು ನೀಡುವಂತೆ ಹೇಳಿದ್ದರಿಂದ ತಡವಾಗಿ ದೂರು ನೀಡುತ್ತಿರುವುದಾಗಿ ಯುವತಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.

ರಸ್ತೆಯಲ್ಲಿ ಬಿದ್ದ ವ್ಯಕ್ತಿ ಸಾವು
ಮೈಸೂರು
: ಇಲ್ಲಿನ ಹರ್ಷ ರಸ್ತೆಯಲ್ಲಿ ನಡೆಯುತ್ತ ಹೋಗುತ್ತಿದ್ದ ರಾಘವೇಂದ್ರ ಕಾಲೊನಿಯ ನಿವಾಸಿ ಕುಮಾರ್ (30) ಬಿದ್ದು ಸ್ಥಳದಲ್ಲೇ ಮೃತಪ‍ಟ್ಟಿದ್ದಾರೆ.

ಹಲವು ದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮದ್ಯ ಸೇವಿಸಿದ್ದ ಇವರು ಕೆಳಗೆ ಬಿದ್ದು ಮುಖ ಮತ್ತು ತಲೆಗೆ ಗಾಯವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಡಾವಣೆ ರಚಿಸಲು ಹೋದವರ ಮೇಲೆ ಹಲ್ಲೆ
ಮೈಸೂರು:
ಇಲ್ಲಿನ ಕಾವೇರಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಟಿ.ರ್ ಕೃಷ್ಣೇಗೌಡ, ಗುತ್ತಿಗೆದಾರರಾದ ಕೆ.ಶಶಿಧರ್ ಅವರ ಮೇಲೆ ಪಕ್ಕದ ಜಮೀನಿನವರು ಹಲ್ಲೆ ಮಾಡಿದ್ದಾರೆ. ಚಿಕ್ಕಹರದನಹಳ್ಳಿ ಗ್ರಾಮದ ಸರ್ವೆನಂ. 16/3 ರಲ್ಲಿ 0-39 ಗುಂಟೆ ಹಾಗೂ ಸರ್ವೆ ನಂ. 16/4 ರಲ್ಲಿ 0-38 ಗುಂಟೆ ಜಮೀನುಗಳು ಕಾವೇರಿ ಗೃಹ ನಿರ್ಮಾಣ ಸಹಕಾರ ಸಂಘದ ಪರವಾಗಿ 2010ರಲ್ಲಿ ಬಡಾವಣೆ ರಚಿಸುವುದಕ್ಕಾಗಿ ಜಮೀನಿನನ್ನು ಖರೀದಿಸಲಾಗಿತ್ತು.

ಬಡಾವಣೆ ರಚಿಸಲೆಂದು ಹೋದಾಗ ಪಕ್ಕದ ಜಮೀನಿನ ಬಿ.ಕೃಷ್ಣಪ್ಪ ಮತ್ತು ಅವರ ಮಕ್ಕಳಾದ ಉಮೇಶ್, ಕಿರಣ್ ಅವರು ಕಾರ್ಯಕ್ಕೆ ಅಡ್ಡಿಪಡಿಸಿದರು. ಮಾತ್ರವಲ್ಲ ಅಧ್ಯಕ್ಷ ಟಿ.ಆರ್.ಕೃಷ್ಣೇಗೌಡ, ಗುತ್ತಿಗೆದಾರರಾದ ಕೆ.ಶಶಿಧರ್ ಮೇಲೆ ಹಲ್ಲೆ ನಡೆಸಿದರು ಎಂದು ಸಂಘದ ಕಾರ್ಯದರ್ಶಿ ಸಂದೀಪ್ ಅಶೋಕಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.