ADVERTISEMENT

ಸಾಮೂಹಿಕ ಅತ್ಯಾಚಾರ; ಮತ್ತಿಬ್ಬರ ಬಂಧನ

ಪಾಲಿಕೆಯಲ್ಲಿ ನಾಪತ್ತೆಯಾಗಿದ್ದ ವಾಹನ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:10 IST
Last Updated 4 ಜೂನ್ 2019, 20:10 IST

ಮೈಸೂರು: ಮೈಸೂರು ಹೊರವಲಯದಲ್ಲಿ ಯುವತಿಯೊಬ್ಬರ ಮೇಲೆ ಈಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತಿಬ್ಬರು ಯುವಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 5ಕ್ಕೆ ಏರಿದೆ.

ಮಧು ಅಲಿಯಾಸ್ ಬಾಂಡ್ (23) ಹಾಗೂ ಪ್ರಶಾಂತ್ ಅಲಿಯಾಸ್ ತಮಿಳ್ (21) ಬಂಧಿತ ಆರೋಪಿಗಳು.

ಕಳೆದ ಶುಕ್ರವಾರವಷ್ಟೇ ಕಾರ್ತಿಕ್‌ ಕುಮಾರ್ (25), ಸೂರ್ಯಕುಮಾರ್ (23) ಹಾಗೂ ಜೀವನ್ (25) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ADVERTISEMENT

ಲಿಂಗಾಂಬುಧಿಪಾಳ್ಯ ಸಮೀಪದ ನಿರ್ಜನ ಪ್ರದೇಶದಲ್ಲಿ ಮೇ 8ರ ರಾತ್ರಿ ಅತ್ಯಾಚಾರ ಎಸಗಿದ್ದ ಆರೋಪಿಗಳು, ಯುವತಿಯ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದರು. ಯುವತಿಯ ಮೇಲಿನ ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪಾಲಿಕೆಯಲ್ಲಿ ನಾಪತ್ತೆಯಾಗಿದ್ದ ವಾಹನ ಪತ್ತೆ: ಪಾಲಿಕೆ ಆವರಣದಲ್ಲಿ ನಾಪತ್ತೆಯಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕೇಬಲ್‌ಗಳಿದ್ದ ವಾಹನವು ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಅಧಿಕಾರಿಗಳೇ ವಾಹನವನ್ನು ಅದರ ಮಾಲೀಕರಿಗೆ ನೀಡಿರುವ ಅಂಶ ತನಿಖೆ ವೇಳೆ ಗೊತ್ತಾಗಿದೆ.

ವಾಹನ ಹುಡುಕುತ್ತ ಹೊರಟ ಕೆ.ಆರ್.ಠಾಣೆ ಪೊಲೀಸರು ವೆಲ್ಲೂರು ಜಿಲ್ಲೆಯ ವಾಣಿಯಂಬಾಡಿಯಲ್ಲಿ ವಾಹನವನ್ನು ವಶಕ್ಕೆ ತೆಗೆದುಕೊಂಡು ಪ್ರದೀಪ ಹಾಗೂ ಸುಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.‌

‘ಪಾಲಿಕೆಯ ಅಧಿಕಾರಿಗಳೇ ಹಣ ಪಡೆದು ವಾಹನವನ್ನು ಬಿಟ್ಟಿದ್ದಾರೆ’ ಎಂದು ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ನಿಯಮಬಾಹಿರವಾಗಿ ಕೇಬಲ್ ಅಳವಡಿಸುತ್ತಿದ್ದುದ್ದನ್ನು ಪತ್ತೆ ಹಚ್ಚಿದ ಪಾಲಿಕೆ ಅಧಿಕಾರಿಗಳು ಕೇಬಲ್‌ಗಳ ಸಮೇತ ವಾಹನವನ್ನು ಜಫ್ತಿ ಮಾಡಿದ್ದರು. ಈ ವಾಹನ ನಂತರ ಕಳವಾಗಿತ್ತು.

ಕೆ.ಆರ್.ಠಾಣೆ ಇನ್‌ಸ್ಪೆಕ್ಟರ್ ವಿ.ನಾರಾಯಣಸ್ವಾಮಿ, ಸಬ್‌ಇನ್‌ಸ್ಪೆಕ್ಟರ್ ರವಿಕುಮಾರ್, ಲಕ್ಷ್ಮಣ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.