ADVERTISEMENT

ಬೆಟ್ಟದಪುರ ರಥಬೀದಿ: ಕಾಂಕ್ರೀಟ್‌ ರಸ್ತೆಗೆ ಆಗ್ರಹ

ರಥ ಸಾಗುವ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು; ವಾಹನ ಸವಾರರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 5:55 IST
Last Updated 28 ಜುಲೈ 2021, 5:55 IST
ಬೆಟ್ಟದಪುರದ ರಥಬೀದಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ (ಎಡಚಿತ್ರ). ರಸ್ತೆಯ ಅಕ್ಕಪಕ್ಕದಲ್ಲಿ ತಂಬಾಕು ಹದಗೊಳಿಸಲು ಸೌದೆಗಳನ್ನು ಜೋಡಿಸಲಾಗಿದೆ
ಬೆಟ್ಟದಪುರದ ರಥಬೀದಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ (ಎಡಚಿತ್ರ). ರಸ್ತೆಯ ಅಕ್ಕಪಕ್ಕದಲ್ಲಿ ತಂಬಾಕು ಹದಗೊಳಿಸಲು ಸೌದೆಗಳನ್ನು ಜೋಡಿಸಲಾಗಿದೆ   

ಬೆಟ್ಟದಪುರ: ಪಟ್ಟಣದ ರಥಬೀದಿಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರ ಓಡಾಟಕ್ಕೆ ತೊಂದರೆ ಉಂಟಾಗಿದೆ.

ಈ ಬೀದಿಯಲ್ಲೇ ಸಿಡಿಲು ಮಲ್ಲಿಕಾರ್ಜುನ ಬ್ರಹ್ಮರಥೋತ್ಸವ ನಡೆಯುತ್ತದೆ. ರಥ ಸಾಗುವ ರಸ್ತೆಯ ಅಭಿವೃದ್ಧಿಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಈ ರಸ್ತೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ 2 ಡೇರಿಗಳಿದ್ದು, ಪ್ರತಿನಿತ್ಯ ಡೇರಿಗಳಿಗೆ ಹಾಲು ತರಲು ರೈತಾಪಿ ವರ್ಗದವರು ಸೈಕಲ್ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬರುತ್ತಾರೆ. ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಾಗಲು ತೊಂದರೆ ಉಂಟಾಗುತ್ತಿದೆ. ಪಾತ್ರಗಳಿಂದ ಹಾಲು ಚೆಲ್ಲಿ ರಸ್ತೆ ಪಾಲಾಗುತ್ತಿದೆ.

ADVERTISEMENT

ರಸ್ತೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದಿವೆ. ಅಲ್ಲಲ್ಲಿ ಕಸದ ರಾಶಿ ಹಾಕಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ತಂಬಾಕು ಹದಗೊಳಿಸಲು ಸೌದೆಗಳನ್ನು ಹಾಕಿದ್ದು, ಇದರಿಂದ ಓಡಾಡುವವರಿಗೂ ಸಮಸ್ಯೆ ಉಂಟಾಗಿದೆ.

ಕೆ.ಆರ್.ನಗರ ಮುಖ್ಯರಸ್ತೆಯಿಂದ ಪಿರಿಯಾಪಟ್ಟಣ ಮುಖ್ಯರಸ್ತೆಯವರೆಗೂ ಗ್ರಾಮದೊಳಗೆ ಹೋಗುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ಮುಖಂಡ ಕುಮಾರ್ ದೂರಿದರು.

‘ಕೆ.ವೆಂಕಟೇಶ್ ಶಾಸಕರಾಗಿದ್ದ ಅವಧಿಯಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ನಂತರ ಮಳೆ, ಹೆಚ್ಚು ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿದೆ. ರಥ ಹೋಗುವ ರಸ್ತೆಗೆ ಡಾಂಬರು ಬದಲಿಗೆ, ಸಿಮೆಂಟ್ ಹಾಕಿದರೆ ದೀರ್ಘ ಕಾಲ ಬಾಳಿಕೆ ಬರುತ್ತದೆ. ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅನಿತಾ ತೋಟಪ್ಪಶೆಟ್ಟಿ ಹೇಳಿದರು.

‘₹2 ಕೋಟಿ ಮಂಜೂರು’

‘ಶಾಸಕರ ವಿಶೇಷ ಅನುದಾನದಡಿ ರಸ್ತೆ ಅಭಿವೃದ್ಧಿಗೆ ₹2 ಕೋಟಿ ಮಂಜೂರು ಮಾಡಿದ್ದು, ಅಧಿಕಾರಿಗಳು ಸರ್ವೆ ಕಾರ್ಯ ಮುಗಿಸಿದ್ದಾರೆ. ಲಾಕ್‌ಡೌನ್ ಜಾರಿಯಾಗಿದ್ದರಿಂದ ಕೆಲಸ ಪ್ರಾರಂಭಿಸಲು ತಡವಾಗಿದೆ. ತಕ್ಷಣ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ವಾರಕ್ಕೆ ಎರಡು ದಿನ ಕಸ ಸಂಗ್ರಹಿಸುತ್ತಿದ್ದರೂ ಕೆಲವರು ರಸ್ತೆ ಪಕ್ಕದಲ್ಲಿ ಕಸ ಹಾಕುತ್ತಿದ್ದಾರೆ. ಅದನ್ನು ನಿಯಂತ್ರಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.

–ದಿವಾಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.