ADVERTISEMENT

ಆರೋಪಗಳನ್ನು ಎದುರಿಸಲು ಸನ್ನದ್ಧವಾಗಿದ್ದೇನೆ, ಅವರದೂ ಬಿಚ್ಚಿಡ್ತೀನಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 7:54 IST
Last Updated 10 ಆಗಸ್ಟ್ 2024, 7:54 IST
   

ಮೈಸೂರು: 'ನನ್ನ ವಿರುದ್ಧದ ಆರೋಪಗಳನ್ನು ಎದುರಿಸಲು ಸನ್ನದ್ಧನಾಗಿದ್ದೇನೆ. ರಾಜಕೀಯ ಹಾಗೂ ಕಾನೂನಿನ ಮೂಲಕ ಪ್ರತ್ಯುತ್ತರ ಕೊಡುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ತಮ್ಮ ನಿವಾಸದ ಬಳಿ ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಇಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಹಲವು ‌ವಿಚಾರಗಳನ್ನು ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಜನರ ಮುಂದೆ ಇಡುತ್ತೇನೆ ಎಂದು ಹೇಳಿದರು.

ADVERTISEMENT

ಬಿ.ವೈ.ವಿಜಯೇಂದ್ರ, ಬಿ‌.ಎಸ್. ಯಡಿಯೂರಪ್ಪ , ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್ ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಈಗಾಗಲೇ ಕೆಲವು ಹಗರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಆ ಬಗ್ಗೆ ಹೆಚ್ಚು ಮಾತನಾಡುತ್ತೇನೆ. ಇನ್ನೂ ಕೆಲವು ಹಗರಣಗಳು ಬಾಕಿ ಇವೆ ಎಂದರು.

ಬಿಜೆಪಿ- ಜೆಡಿಎಸ್ ನಾಯಕರ ಆರೋಪಗಳನ್ನು ಎದುರಿಸಲು ಸಿದ್ಧನಿದ್ದೇನೆ. ಬಿಜೆಪಿ- ಜೆಡಿಎಸ್‌ನವರು ಪಾದಯಾತ್ರೆ ಮಾಡಿದ್ದಕ್ಕೆ ನಾವು ಜನಾಂದೋಲನ ಸಮಾವೇಶ

ಮಾಡಿದೆವು. ಅವರು ಮಾಡುತ್ತಿರುವ ಆರೋಪ ಸುಳ್ಳು ಎಂದು ತಿಳಿಸಲು ಜನಾಂದೋಲನ ಸಮಾವೇಶ ನಡೆಸಿದೆವು. ನನಗೆ ಮಸಿ ಬಳಿಯಲು ವಿರೋಧ ಪಕ್ಷದವರು ಪ್ರಯತ್ನ ಪಡುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದದಿಂದ ಬಂದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ‌.

ನನಗೆ ಮಸಿ ಬಳಿದರೆ ರಾಜಕೀಯವಾಗಿ ಅನುಕೂಲ ಆಗುತ್ತದೆ ಎನ್ನುವ ಭ್ರಮೆಯಲ್ಲಿ ವಿರೋಧ ಪಕ್ಷದವರು

ಇದ್ದಾರೆ. ಅವರ ಹಗರಣಗಳು ಬಹಳಷ್ಟಿವೆ. ಎಲ್ಲವನ್ನೂ ಬಿಚ್ಚಿಡುತ್ತೇವೆ. ಯಾರೆಲ್ಲ ತಪ್ಪಿತಸ್ಥರು ಇದ್ದಾರೆಯೋ ಅವರೆಲರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಚಾಮುಂಡೇಶ್ವರಿ ದರ್ಶನ ಪಡೆದ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಾವಣ ಶನಿವಾರ ಪ್ರಯುಕ್ತ ಇಲ್ಲಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.