ADVERTISEMENT

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮೇ 2021, 16:06 IST
Last Updated 12 ಮೇ 2021, 16:06 IST
   

ಮೈಸೂರು: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ಎರಡು ಜಾಲವನ್ನು ಪತ್ತೆ ಮಾಡಿದ ಮೈಸೂರು ಸಿಸಿಬಿ ಪೊಲೀಸರು, ಬುಧವಾರ ಐವರನ್ನು ಬಂಧಿಸಿದ್ದಾರೆ.

ಜೆ.ಪಿ.ನಗರದ ಕಾಮಾಕ್ಷಿ ಆಸ್ಪತ್ರೆಯ ಶುಶ್ರೂಷಕ ಜಿ.ಸುರೇಶ್ (27), ಕೆ.ಆರ್.ಆಸ್ಪತ್ರೆಯ ಇನ್ಸ್ಟಿಟ್ಯೂಟ್‌ ಆಫ್‌ ನೆಪ್ರೋ ನ್ಯೂರೋ ಶುಶ್ರೂಷಕ ಡಿ.ಎಂ.ರಾಘವೇಂದ್ರ (27), ಕೆ.ಆರ್.ಆಸ್ಪತ್ರೆಯ ಶುಶ್ರೂಷಕ ಅಶೋಕ (31), ವಿಶ್ವೇಶ್ವರ ನಗರದ ಗಿರೀಶ್‌ಚಂದ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (ಜಿಸಿಎಸ್) ಶುಶ್ರೂಷಕರಾದ ಕೆ.ರಾಜೇಶ್ (20), ಡಿ.ವಿ.ಮಲ್ಲೇಶ್ (20) ಬಂಧಿತ ಆರೋಪಿಗಳು.

ಕಾಮಾಕ್ಷಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಬೇಕಿದ್ದ ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು (4 ಕೇವೆಫಾರ್, ರೆಮ್‌ಡಿಸಿವಿರ್ 100 ಎಂಜಿ/20 ಎಂಎಲ್) ಸುರೇಶ್‌ ಕಾಳಸಂತೆಯಲ್ಲಿ ಮಾರಾಟ ಮಾಡಲು ರಾಘವೇಂದ್ರ, ಅಶೋಕ ಅವರಿಗೆ ನೀಡಿದ್ದಾರೆ. ಈ ಮೂವರನ್ನು ನಗರದ ಕೆ.ಆರ್.ಮೊಹಲ್ಲಾದ ಶಂಕರಮಠ ರಸ್ತೆಯಲ್ಲಿರುವ, ನಟರಾಜ ಪ್ರೌಢಶಾಲೆಯ ಮುಂಭಾಗ ಬಂಧಿಸಿದ ಪೊಲೀಸರು, ₹ 70 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ADVERTISEMENT

ಮತ್ತೊಂದು ಪ್ರಕರಣದಲ್ಲಿ ವಿಶ್ವೇಶ್ವರನಗರದಲ್ಲಿರುವ ಗಿರೀಶ್‌ಚಂದ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಜಿಸಿಎಸ್)ಯ ರೋಗಿಗಳಿಗೆ ಕೊಡಬೇಕಿದ್ದ 6 ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ, ಇದೇ ಆಸ್ಪತ್ರೆಯ ಶುಶ್ರೂಷಕರಾದ ರಾಜೇಶ, ಮಲ್ಲೇಶ್‌ನನ್ನು ಖಚಿತ ಮಾಹಿತಿ ಮೇರೆಗೆ ಗಾಂಧಿನಗರದಲ್ಲಿನ ವೃದ್ದಾಶ್ರಮದ ಮುಂಭಾಗ ಬಂಧಿಸಿದ್ದಾರೆ ಎಂದು ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.