ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಪಂಡಿತ್ ರಾಜೀವ ತಾರಾನಾಥ ಅವರ ಮೊದಲ ವರ್ಷದ ನೆನೆಪಿನ ಕಾರ್ಯಕ್ರಮದಲ್ಲಿ ‘ಸರೋದ್ ಸ್ವರಯಾನ’ ಕೃತಿಯನ್ನು ಸಿತಾರ್ ವಾದಕಿ ಸಿ.ಎಸ್.ಸರ್ವಮಂಗಳಾ ಬಿಡುಗಡೆ ಮಾಡಿದರು.
–ಪ್ರಜಾವಾಣಿ ಚಿತ್ರ
ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯು ಬುಧವಾರ ನಗರದ ವಿವಿಧೆಡೆ ನಡೆಯಿತು. ಪುಸ್ತಕ ಬಿಡುಗಡೆ, ಸಂಸ್ಮರಣೆ ಹಾಗೂ ಸಂಗೀತ ಕಛೇರಿಗಳನ್ನು ಏರ್ಪಡಿಸಲಾಗಿತ್ತು.
ಲಕ್ಷ್ಮಿಪುರಂನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ‘ಸರೋದ್ ಸ್ವರಯಾನ’ ಕೃತಿಯ 3ನೇ ಮುದ್ರಣವನ್ನು ಸಿತಾರ್ ವಾದಕಿ ಹಾಗೂ ಲೇಖಕಿ ಸಿ.ಎಸ್.ಸರ್ವಮಂಗಳಾ ಬಿಡುಗಡೆ ಮಾಡಿದರು.
ನಂತರ ಮಾತನಾಡಿ, ‘ಸಂಗೀತ ಮತ್ತು ಸಾಹಿತ್ಯದ ಸೇತುವೆಯಂತಿದ್ದ ರಾಜೀವರು, ಸಂಗೀತದ ಸೂಕ್ಷ್ಮ ಎಳೆಗಳನ್ನು ಗ್ರಹಿಸಿ, ಸಾಹಿತ್ಯದ ಓದಿಗೆ ತೆರೆದುಕೊಳ್ಳುತ್ತಿದ್ದರು. ಹೀಗಾಗಿಯೇ, ಇಂಗ್ಲಿಷ್ ಸಾಹಿತ್ಯ ವಿಮರ್ಶೆಯಲ್ಲಿ ಹೆಸರು ಮಾಡಿದ್ದರು. ಸಾಹಿತ್ಯ ನೋಡುವ ಅಭ್ಯಾಸ ಕ್ರಮವು ಶಿಸ್ತಿನದ್ದಾಗಿತ್ತು. ಅದು ಸಂಗೀತದ ಗ್ರಹಿಕೆಯಲ್ಲೂ ನೆರವಾಗಿತ್ತು’ ಎಂದು ವಿವರಿಸಿದರು.
‘ಸಂಗೀತ– ಸಾಹಿತ್ಯದ ಸಮನ್ವಯದಲ್ಲಿ ಅರಳಿದ ಪ್ರತಿಭೆಯು ನೂರಾರು ಶಿಷ್ಯರಿಗೆ ಮಾರ್ಗದರ್ಶಿಯಾಗಿತ್ತು. ಸಂಗೀತ ಉಳಿಸಿ ಬೆಳೆಸಲು ಸದಾ ಆಲೋಚನೆ ಮಾಡುತ್ತಿದ್ದ ಆ ದೊಡ್ಡ ಬೆಳಕು ಕಣ್ಮರೆಯಾಗಿ ಒಂದು ವರ್ಷವಾದ ಖಾಲಿತನ ಇನ್ನೂ ಉಳಿದಿದೆ’ ಎಂದು ಸ್ಮರಿಸಿದರು.
‘ಪಾಠದಲ್ಲಿ ಸಂಕೀರ್ಣ ವಿಚಾರಗಳನ್ನು ಸರಳ ಭಾಷೆಯಲ್ಲಿ ಅರ್ಥೈಸುತ್ತಿದ್ದರು. ಅವರ ಜನಪರವಾಗಿದ್ದ ಚಿಂತನಶೀಲ ಮನಸ್ಸು ಎಲ್ಲರನ್ನೂ ಸೆಳೆಯುತ್ತಿತ್ತು. ಸಂಗೀತ, ಸಾಹಿತ್ಯ, ರಂಗಭೂಮಿ, ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅವರ ಮಾತುಗಳು, ಕೃತಿಗಳು ಒಳನೋಟವನ್ನು ಹೊಂದಿವೆ’ ಎಂದರು.
‘ಸರೋದ್ ಮತ್ತು ಸಿತಾರ್ ಅವಳಿ ಮಕ್ಕಳು ಎಂದಿದ್ದ ಅವರು, ಸರೋದತ್ವದ ಬಗ್ಗೆ ಬಹಳ ಮಾತನಾಡುತ್ತಿದ್ದರು. ನಾದ ಶುದ್ಧತೆಯನ್ನು ಸಿತಾರ್‌ಗಿಂತಲೂ ಸರೋದ್‌ನಲ್ಲಿ ತರಬಹುದೆಂಬ ವಾದ ಅವರದ್ದಾಗಿತ್ತು. ಏಕರೂಪತೆ ದಾಟುವ ಸಾಧ್ಯತೆಯಿದೆ ಎಂದಿದ್ದರು. ಗುರು ಎಲ್ಲಿದ್ದಾರೆ ಎಂದು ಕೇಳಿದರೆ, ಅಲಿ ಅಕ್ಬರ್ ಖಾನ್ ನನ್ನ ಕೈ ಬೆರಳಲ್ಲಿದ್ದಾರೆ ಎನ್ನುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.
ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ‘ದೈವದತ್ತವಾದ ಬುದ್ದುವಂತಿಕೆ ಮತ್ತು ಪ್ರತಿಭೆ ರಾಜೀವರಿಗಿತ್ತು. ಐಎಎಸ್ ಅಧಿಕಾರಿಯೋ, ದೊಡ್ಡ ವಿಮರ್ಶಕರೋ, ಗಾಯಕರೋ ಆಗಬಹುದಿತ್ತು. ಆದರೆ, ಸರೋದ್ ಕಲಿತದ್ದು ದೇಶದ ಸಂಗೀತ ಪರಂಪರೆಯಲ್ಲಿ ಮಹತ್ವದ ಘಟ್ಟ. ಅವರ ಬದ್ಧತೆ ಹಾಗೂ ಶ್ರದ್ಧೆ ಗಮನಿಸಿದ ಗುರು ಅಲಿ ಅಕ್ಬರ್ ಖಾನ್, ಅನ್ನಪೂರ್ಣ ದೇವಿ, ಪಂಡಿತ್ ರವಿಶಂಕರ್ ಅವರು ಗುರು ಕಾಣಿಕೆ ಪಡೆಯದೇ ಸಂಗೀತ ಕಲಿಸಿದರು’ ಎಂದು ನುಡಿದರು.
ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್, ಕೃತಿಯ ಸಂಪಾದಕರಾದ ಗಣೇಶ ಅಮೀನಗಡ, ರಘುಪತಿ ತಾಮ್ಹನ್‌ಕರ್ ಪಾಲ್ಗೊಂಡಿದ್ದರು.
ಪುಸ್ತಕ ಪರಿಚಯ
ಕೃತಿ: ಸರೋದ್ ಸ್ವರಯಾನ
ಸಂಪಾದಕರು: ಗಣೇಶ ಅಮೀನಗಡ ರಘುಪತಿ ತಾಮ್ಹನ್‌ಕರ್
ಪ್ರಕಾಶನ: ಕವಿತಾ ಪ್ರಕಾಶನ
ಪುಟಗಳು: 218 ಬೆಲೆ: ₹ 400
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.