ADVERTISEMENT

‘ಇಂಗ್ಲಿಷ್‌ ಮತ್ತಿನಲ್ಲಿ ತಾಯ್ನುಡಿ ಕೊಲ್ಲುವಿಕೆ’

ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 57ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಚಂದ್ರಶೇಖರ ಕಂಬಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:49 IST
Last Updated 1 ಆಗಸ್ಟ್ 2019, 14:49 IST
ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 57ನೇ ಸಂಸ್ಥಾಪನಾ ದಿನಾಚರಣೆಗೆ ಗುರುವಾರ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಚಾಲನೆ ನೀಡಿದರು. ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಆರ್‌ಐಇ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಡೀನ್ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ, ಡೀನ್ ಪ್ರೊ.ಜಿ.ವಿ.ಗೋಪಾಲ್ ಇದ್ದಾರೆ.- PHOTO / SAVITHA B R
ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 57ನೇ ಸಂಸ್ಥಾಪನಾ ದಿನಾಚರಣೆಗೆ ಗುರುವಾರ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಚಾಲನೆ ನೀಡಿದರು. ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಆರ್‌ಐಇ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಡೀನ್ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ, ಡೀನ್ ಪ್ರೊ.ಜಿ.ವಿ.ಗೋಪಾಲ್ ಇದ್ದಾರೆ.- PHOTO / SAVITHA B R   

ಮೈಸೂರು: ‘ಇಂಗ್ಲಿಷ್‌ ಮತ್ತಿನಲ್ಲಿ ತಾಯ್ನುಡಿಯ ಕೊಲ್ಲುತ್ತೇವೆ ಎಂಬ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಗುರುವಾರ ಇಲ್ಲಿ ಆತಂಕ ವ್ಯಕ್ತಪಡಿಸಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯ (ಆರ್‌ಐಇ) 57ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ‘ತಾಯ್ನುಡಿಯ ಕಾಪಾಡಲು ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು’ ಎಂದು ಮನವಿ ಮಾಡಿದರು.

‘ವಿದ್ಯೆ ಎಂದರೇ ಇಂಗ್ಲಿಷ್‌ ಎಂಬ ಭ್ರಮೆಯಲ್ಲಿದ್ದೇವೆ. ಅನ್ನದ ಭಾಷೆಯದು. ಪ್ರಪಂಚದ ಎಲ್ಲೆಡೆ ಪ್ರಚಲಿತದಲ್ಲಿದೆ ಎಂಬ ಮತ್ತಿನಲ್ಲಿ ನಮ್ಮ ತಾಯ್ನುಡಿಯನ್ನು ಮರೆಯುತ್ತಿದ್ದೇವೆ. ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗಿ ಏಳು ದಶಕ ಗತಿಸಿದರೂ; ಇಂದಿಗೂ ಅದೇ ದಾಸ್ಯದ ಮನದಲ್ಲಿ ವರ್ತಿಸುತ್ತಿದ್ದೇವೆ. ಇದು ಬದಲಾಗಬೇಕಿದೆ’ ಎಂದು ಕಂಬಾರ ಪ್ರತಿಪಾದಿಸಿದರು.

ADVERTISEMENT

‘ಇಂದಿಗೂ ಇಂಗ್ಲಿಷ್‌ನ ದಾಸ್ಯಕ್ಕೀಡಾಗುವುದು ಎಂದರೇ ಅಸಹ್ಯ. ಜರ್ಮನಿ, ಫ್ರಾನ್ಸ್‌, ಜಪಾನ್‌, ಚೀನಾದಲ್ಲಿ ಇಂಗ್ಲಿಷ್‌ ಪ್ರಧಾನವೇ ಅಲ್ಲ. ಆಂಗ್ಲ ಭಾಷೆಯ ಮೋಹದ ಬಲೆಗೆ ಸಿಲುಕಿ ಮಕ್ಕಳನ್ನು ಗಿಳಿಗಳನ್ನಾಗಿಸಬೇಡಿ. ಅವರಲ್ಲಿನ ಸೃಜನಶೀಲತೆಯನ್ನು ಕೊಲ್ಲಬೇಡಿ’ ಎಂದು ಕಿವಿಮಾತು ಹೇಳಿದರು.

‘ಮಕ್ಕಳಲ್ಲಿನ ಸೃಜನಶೀಲತೆ ಹೆಚ್ಚಬೇಕು ಎಂದರೇ ಮಾತೃಭಾಷೆಯಲ್ಲೇ ಶಿಕ್ಷಣ ಕೊಡಬೇಕು. ಎಸ್ಸೆಸ್ಸೆಲ್ಸಿಯವರೆಗೂ ಮಾತೃಭಾಷಾ ಶಿಕ್ಷಣವೇ ಇರಬೇಕು ಎಂಬುದು ಶಿಕ್ಷಣ ತಜ್ಞರ ಅನಿಸಿಕೆ. ಮಹಾತ್ಮಗಾಂಧಿ ಸಹ ನನ್ನ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕೊಡಿಸುವೆ ಎಂದಿದ್ದರು.’

‘ನಮ್ಮ ಮಕ್ಕಳು ಕಲಿತ ವಿದ್ಯೆ ನಮ್ಮ ದೇಶಕ್ಕೆ ಉಪಯೋಗವಾಗಬೇಕಿದೆ. ಮಕ್ಕಳು ನಮ್ಮ ಕಣ್ಮುಂದಿರುವಂಥಹ ಶಿಕ್ಷಣವನ್ನು ನಾವು ಕೊಡಬೇಕಿದೆ. ಇಂಗ್ಲಿಷಿನ ದಾಸರಾದರೆ ಮಕ್ಕಳ ಸೃಜನಶೀಲತೆಯೇ ನಾಶವಾಗಲಿದೆ’ ಎಂದು ಕಂಬಾರ ಅಭಿಪ್ರಾಯಪಟ್ಟರು.

‘ಮೆಕಾಲೆ ಶಿಕ್ಷಣ ಪದ್ಧತಿ ಅನುಸರಿಸುತ್ತಿರುವ ನಮಗೆ ಇತಿಹಾಸದ ಕಲ್ಪನೆಯೇ ಇಲ್ಲವಾಗಿದೆ. ನಮ್ಮ ಭಾಷೆ, ಶಿಕ್ಷಣದ ಬಗ್ಗೆ ನಮಗರಿವಿಲ್ಲದಂತೆ ಕೀಳರಿಮೆ ಬೆಳೆಸಿಕೊಂಡಿದ್ದೇವೆ. ನಮ್ಮ ಪದ್ಧತಿಯನ್ನು ಮೂಢನಂಬಿಕೆ ಎಂದುಕೊಂಡಿದ್ದೇವೆ. ಎಲ್ಲದಕ್ಕೂ ಮಿಗಿಲಾಗಿ ಪ್ರಶ್ನಿಸುವ ಮನೋಭಾವವನ್ನೇ ಕಳೆದುಕೊಂಡು ಬಿಟ್ಟಿದ್ದೇವೆ’ ಎಂದು ಅವರು ಹೇಳಿದರು.

‘ಉದಾತ್ತ ಧ್ಯೇಯೋದ್ದೇಶ ಹೊಂದಿರುವ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ಉತ್ತಮ ಶಿಕ್ಷಕರು ಸಮಾಜಕ್ಕೆ ಇಂದು ದೊರಕದಾಗಿದ್ದಾರೆ. ಉತ್ತಮ ಶಿಕ್ಷಕರನ್ನು ರೂಪಿಸುವ ಗುರಿ ಹೊಂದಿರುವ ಆರ್‌ಐಇ ಇನ್ನಿತರ ಸಂಸ್ಥೆಗಳಿಗೂ ಮಾದರಿಯಾಗಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.