ADVERTISEMENT

ಮೈಸೂರು: ಗಜಪಡೆ ತಾಲೀಮಿಗೆ ಸಿದ್ಧವಾಯಿತು ರಸ್ತೆ!

ಅರಮನೆ ದರ್ಬಾರ್‌ ಹಾಲ್‌ ಸಿಂಗಾರ–ವಿದ್ಯುತ್‌ ಬಲ್ಬುಗಳ ದುರಸ್ತಿ, ಹೂತೋಟ ನಿರ್ಮಾಣ

ಕೆ.ಓಂಕಾರ ಮೂರ್ತಿ
Published 24 ಸೆಪ್ಟೆಂಬರ್ 2020, 3:12 IST
Last Updated 24 ಸೆಪ್ಟೆಂಬರ್ 2020, 3:12 IST
ಅರಮನೆ ಆವರಣದಲ್ಲಿ ಸಿದ್ಧವಾಗಿರುವ ಕಾಂಕ್ರೀಟ್‌ ಇಂಟರ್‌ ಲಾಕ್‌ ರಸ್ತೆ (ಎಡಚಿತ್ರ) ಮೈಸೂರು ಅರಮನೆ ಉದ್ಯಾನದಲ್ಲಿ ನಡೆದಿರುವ ಹೂ ತೋಟದ ನಿರ್ಮಾಣ ಕಾರ್ಯ ಪ್ರಜಾವಾಣಿ ಚಿತ್ರ–ಬಿ.ಆರ್‌.ಸವಿತಾ
ಅರಮನೆ ಆವರಣದಲ್ಲಿ ಸಿದ್ಧವಾಗಿರುವ ಕಾಂಕ್ರೀಟ್‌ ಇಂಟರ್‌ ಲಾಕ್‌ ರಸ್ತೆ (ಎಡಚಿತ್ರ) ಮೈಸೂರು ಅರಮನೆ ಉದ್ಯಾನದಲ್ಲಿ ನಡೆದಿರುವ ಹೂ ತೋಟದ ನಿರ್ಮಾಣ ಕಾರ್ಯ ಪ್ರಜಾವಾಣಿ ಚಿತ್ರ–ಬಿ.ಆರ್‌.ಸವಿತಾ   

ಮೈಸೂರು: ಗಜಪಡೆಯ ತಾಲೀಮು ಈ ಬಾರಿ ಸಂಪೂರ್ಣವಾಗಿ ಅರಮನೆ ಆವರಣದೊಳಗೆ ನಡೆಯಲಿದ್ದು, ಅದಕ್ಕಾಗಿ ಕಾಂಕ್ರೀಟ್‌ ರಸ್ತೆ ಸಿದ್ಧಗೊಂಡಿದೆ.

ಕೋವಿಡ್‌–19 ಕಾರಣ ಈ ಬಾರಿ ಬನ್ನಿಮಂಟಪದವರೆಗಿನ ರಾಜ ಮಾರ್ಗದಲ್ಲಿ ತಾಲೀಮು ಇರುವುದಿಲ್ಲ. ಹೀಗಾಗಿ, ನಿತ್ಯ ಅರಮನೆ ಆವರಣದಲ್ಲೇ ಆನೆಗಳು ಸುತ್ತಾಡಲಿವೆ. ಅ.26ರಂದು ಇಲ್ಲಿಯೇ ಜಂಬೂಸವಾರಿ ನಡೆಯಲಿದೆ. ಅದಕ್ಕಾಗಿ ಗಜಪಡೆ ವಾಸ್ತವ್ಯ ಹೂಡುವ ಸ್ಥಳ, ಅವುಗಳಿಗೆ ಸ್ನಾನ ಮಾಡಿಸುವ ಸ್ಥಳದ ಮಾರ್ಗಕ್ಕೆ ಸಿಮೆಂಟ್‌ ಇಂಟರ್‌ ಲಾಕ್‌ ಅಳವಡಿಸಲಾಗಿದೆ.

ಈ ಮೂಲಕ ತಾಲೀಮು ಹಾಗೂ ಮೆರವಣಿಗೆಯನ್ನು ಸರಾಗವಾಗಿ ನಿಭಾಯಿಸಲು ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿವೆ.

ADVERTISEMENT

ದಸರಾ ಮಹೋತ್ಸವ ಈ ಸಲ ಸಂಪೂರ್ಣವಾಗಿ ಅರಮನೆಗೆ ಕೇಂದ್ರೀಕೃತವಾಗಿರುವುದರಿಂದ, ಐತಿಹಾಸಿಕ ಕಟ್ಟಡದೊಳಗೆ ಹಾಗೂ ಹೊರಗೆ ಸಿಂಗಾರ ಕಾರ್ಯ ನಡೆಯುತ್ತಿದೆ. ಪ್ರವೇಶದ್ವಾರ, ಗ್ರಿಲ್‌ಗಳಿಗೆ ಬಣ್ಣ ಬಳಿಯುವ ಹಾಗೂ ಕೆಟ್ಟು ಹೋಗಿರುವ ಬಲ್ಬುಗಳ ಬದಲಾವಣೆ ಕೆಲಸವೂ ನಡೆಯುತ್ತಿದೆ. ದರ್ಬಾರ್‌ ಹಾಲ್‌, ಖಾಸಗಿ ದರ್ಬಾರ್‌ ಹಾಲ್‌, ಕಲ್ಯಾಣ ಮಂಟಪದಲ್ಲಿನ ಚಾಂಡಲಿಯರ್‌ ವಿದ್ಯುತ್ ದೀಪಗಳನ್ನು ಸರಿಪಡಿಸಲಾಗುತ್ತಿದೆ.

ಅ.17ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ಅರಮನೆ ಮುಂಭಾಗದಲ್ಲಿ ನಿತ್ಯ ವಿವಿಧ ಕಾರ್ಯಕ್ರಮಗಳು ಜರು ಗಲಿವೆ. ಅ.26ರಂದು ಮೆರವಣಿಗೆ ನಡೆಯಲಿದೆ. ಮೆರವಣಿಗೆ ವೀಕ್ಷಣೆಗೆ ಎಷ್ಟು ಮಂದಿಗೆ ಅವಕಾಶ ನೀಡಬೇ ಕೆಂಬ ಗೊಂದಲ ಇನ್ನೂ ಬಗೆಹರಿದಿಲ್ಲ.

‘ಮೆರವಣಿಗೆಯ ದಿನದಂದು ಎರಡು ಸಾವಿರ ಮಂದಿಗೆ ಅರಮನೆ ಆವರಣದೊಳಗೆ ಆಸನ ವ್ಯವಸ್ಥೆ ಮಾಡುವ ಆಲೋಚನೆ ಇದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಸಿಗಬೇಕಿದೆ. ಈ ಸಂಬಂಧ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

9 ದಿನಗಳೂ ಅರಮನೆಯು ದೀಪಾಲಂಕಾರದಿಂದ ಕಂಗೊಳಿಸಲಿದೆ. ಅದಕ್ಕೆ ಉದ್ಯಾನದಲ್ಲಿನ ಹೂವಿನ ಸಿಂಗಾರ ಮೆರುಗು ತುಂಬಲಿದೆ. ಫಲಪುಷ್ಪ ಪ್ರದರ್ಶನ ಆಯೋಜನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಐದು ಸಾವಿರ ಕುಂಡಗಳಲ್ಲಿ 22 ಜಾತಿಯ ಹೂವುಗಳನ್ನು ಬೆಳೆಸಲಾಗುತ್ತಿದೆ. ಈ ಬಾರಿ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಇರುವುದಿಲ್ಲ.

ಐದು ಆನೆಗಳು ಅ.2ರಂದು ಅರಮನೆ ಆವರಣ ಪ್ರವೇಶಿಸಲಿವೆ. 3 ರಿಂದಲೇ ತಾಲೀಮು ಆರಂಭವಾಗಲಿದೆ. ಕೋವಿಡ್‌ ಕಾರಣ ಆನೆಗಳ ಶೆಡ್‌ ಬಳಿಗೆ ಈ ಸಲ ಸಾರ್ವಜನಿಕರ ಪ್ರವೇಶ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.