ADVERTISEMENT

ಆರ್‌ಟಿಪಿಸಿಆರ್‌: ದುಬಾರಿ ಶುಲ್ಕ ವಸೂಲಿ

ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ನಿತ್ಯ 3,500 ಜನರಿಗಷ್ಟೇ ಕೋವಿಡ್‌ ಟೆಸ್ಟ್‌: ಖಾಸಗಿ ಆಸ್ಪತ್ರೆಗಳಿಗೆ ದುಂಬಾಲು

ಡಿ.ಬಿ, ನಾಗರಾಜ
Published 13 ಮೇ 2021, 9:06 IST
Last Updated 13 ಮೇ 2021, 9:06 IST
ಕೋವಿಡ್‌ ತಪಾಸಣೆಗಾಗಿ ಸರತಿಯಲ್ಲಿ ಕಾದು ನಿಂತಿದ್ದವರು
ಕೋವಿಡ್‌ ತಪಾಸಣೆಗಾಗಿ ಸರತಿಯಲ್ಲಿ ಕಾದು ನಿಂತಿದ್ದವರು   

ಮೈಸೂರು: ಕೊರೊನಾ ವೈರಸ್‌ ಸೋಂಕು ತಗುಲಿರುವುದನ್ನು ಪತ್ತೆ ಹಚ್ಚಲಿಕ್ಕಾಗಿ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಉಚಿತವಾಗಿ ನಡೆಸುತ್ತಿದ್ದ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡಿಮೆಗೊಳಿಸಿದೆ.

ಇದು ಕೋವಿಡ್‌ನ ಲಕ್ಷಣಗಳನ್ನೊಂದಿರುವವರಲ್ಲಿ ಆತಂಕ ಸೃಷ್ಟಿಸಿದೆ. ನಮಗೂ ವೈರಸ್‌ ತಗುಲಿದೆಯಾ? ಇಲ್ಲವಾ? ಎಂಬುದನ್ನು ಖಚಿತ ಪಡಿಸಿಕೊಳ್ಳಲಿಕ್ಕಾಗಿ, ಇದೀಗ ಹಲವರು ಸ್ವಯಂ ಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ದುಂಬಾಲು ಬೀಳುತ್ತಿದ್ದಾರೆ.

ಕೆಲವು ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಮುಂದಾಗಿದ್ದು, ಸರ್ಕಾರ ನಿಗದಿಪಡಿಸಿರುವ ತಪಾಸಣೆ ದರಕ್ಕಿಂತ ಹೆಚ್ಚಿಗೆ ಪಡೆಯುತ್ತಿವೆ ಎಂಬ ದೂರು ಜಿಲ್ಲೆಯ ವಿವಿಧೆಡೆಯಿಂದ ಕೇಳಿ ಬರುತ್ತಿದೆ.

ADVERTISEMENT

ಆರ್‌ಟಿಪಿಸಿಆರ್‌ ಪರೀಕ್ಷೆಗೆ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಲ್ಲಿ ಒಬ್ಬರಿಗೆ ₹ 800 ಶುಲ್ಕ ಪಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಕೆಲವು ಆಸ್ಪತ್ರೆಗಳು ತಪಾಸಣೆಗೊಳಪಡುವವರಿಂದ ₹ 1100, ₹ 1200 ಪಡೆಯುತ್ತಿವೆ. ಇದು ಮಧ್ಯಮ ವರ್ಗದವರು, ಬಡವರ ಪಾಲಿಗೆ ಕೋವಿಡ್‌ನ ದುರಿತ ಕಾಲದಲ್ಲಿ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ ಎಂಬ ಆಕ್ರೋಶ ಹಲವರದ್ದು.

‘ಆರ್‌ಟಿಪಿಸಿಆರ್‌ ವರದಿ ಬರುವುದು ಕನಿಷ್ಠ ಮೂರು ದಿನಗಳಾಗುತ್ತಿದ್ದು, ತುರ್ತಿದ್ದವರು, ಸೋಂಕಿನ ಲಕ್ಷಣ ಹೆಚ್ಚಿದ್ದವರು ವೈದ್ಯರ ಶಿಫಾರಸಿನ ಮೇರೆಗೆ ಸಿಟಿ ಸ್ಕ್ಯಾನ್‌ ಮಾಡಿಸುತ್ತಿದ್ದಾರೆ. ಆದರೆ ಇಲ್ಲಿಯೂ ಸರ್ಕಾರ ನಿಗದಿ ಪಡಿಸಿದ ದರ ಪಡೆಯುತ್ತಿಲ್ಲ. ವರದಿಯ ನೆಗೆಟಿವ್‌ ಪ್ರತಿ ನೀಡಲು ₹ 4000 ಕೇಳುತ್ತಾರೆ. ಕೆಲವರ ಬಳಿ ₹ 7 ಸಾವಿರ ಪಡೆಯುತ್ತಿದ್ದಾರೆ. ನಮ್ಮಪ್ಪ ತಮ್ಮ ಪ್ರಭಾವ ಬಳಸಿದ್ದರಿಂದ ನಮಗೆ ಕಡಿಮೆ ಪಡೆದರು’ ಎಂದು ನಂಜನಗೂಡಿನ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗೆ ಹಾಗೂ ನನ್ನ ತಂದೆಗೆ ಎರಡ್ಮೂರು ದಿನದಿಂದ ಅನಾರೋಗ್ಯ ಕಾಡುತ್ತಿತ್ತು. ಸ್ಥಳೀಯವಾಗಿಯೇ ಚಿಕಿತ್ಸೆ ಪಡೆದವು. ವೈದ್ಯರ ಶಿಫಾರಸಿನ ಮೇರೆಗೆ ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಹೋದೆವು. ಅಲ್ಲಿ ತಲಾ ಒಬ್ಬರಿಗೆ ₹ 1200 ಶುಲ್ಕ ಕೇಳಿದರು. ಅಪ್ಪ ಪ್ರಶ್ನಿಸಿದ್ದಕ್ಕೆ ಎಲ್ಲರಿಗೂ ₹ 100 ಕಡಿಮೆ ಮಾಡಿದರು. ಕೇಳಿದ್ದಕ್ಕೆ ಸರ್ಕಾರದ ದರ ₹ 800. ಉಳಿದದ್ದು ನಮ್ಮ ಸೇವಾ ಶುಲ್ಕ ಎಂದರು. ಇದ್ಯಾವ ಲೆಕ್ಕ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಆರ್‌ಟಿಪಿಸಿಆರ್‌ ಪರೀಕ್ಷೆಗೆ ಹಾಗೂ ಸಿಟಿ ಸ್ಕ್ಯಾನಿಂಗ್‌ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ದರ ಪಡೆಯುತ್ತಿರುವುದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲಿಕ್ಕಾಗಿ ಮೊಬೈಲ್‌ ಕರೆ ಮಾಡಿದರೆ, ಅವರು ಸ್ವೀಕರಿಸಲೇ ಇಲ್ಲ. ಹಿಂಗಾದರೆ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಬೇಕು’ ಎಂದು ನಿಶಾಂತ್‌ ಪ್ರಶ್ನಿಸಿದರು.

ಕೋವಿಡ್‌ ಪರೀಕ್ಷೆಗೆ ಸರ್ಕಾರಿ ಶುಲ್ಕ ₹ 800

‘ಮೈಸೂರು ನಗರದ 14 ಕಡೆ, ಜಿಲ್ಲೆಯ ತಾಲ್ಲೂಕು ಕೇಂದ್ರ ಸೇರಿದಂತೆ ಪ್ರಮುಖ 10 ಸ್ಥಳಗಳಲ್ಲಿ ನಿತ್ಯವೂ ಕೋವಿಡ್‌ ತಪಾಸಣೆ ನಡೆದಿದೆ. ಈ ಮೊದಲು ದಿನವೂ 10 ಸಾವಿರದ ಆಸುಪಾಸು ತಪಾಸಣೆ ನಡೆಸುತ್ತಿದ್ದೆವು. ಇದೀಗ 3,500 ಜನರನ್ನು ಮಾತ್ರ ತಪಾಸಣೆಗೊಳಪಡಿಸುತ್ತಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮೈಸೂರು ನಗರದಲ್ಲಿ 1 ಸಾವಿರ ಜನರನ್ನು ತಪಾಸಣೆಗೊಳಪಡಿಸಿದರೆ, ಜಿಲ್ಲೆಯಾದ್ಯಂತ 2.5 ಸಾವಿರ ಜನರನ್ನು ತಪಾಸಣೆಗೊಳಪಡಿಸುತ್ತಿದ್ದೇವೆ. ಪಾಸಿಟಿವ್‌ ಪ್ರಕರಣ ಹಿಂದಿನಷ್ಟೇ ಬರುತ್ತಿವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ಅನಗತ್ಯವಾಗಿ ತಪಾಸಣೆಗೊಳಪಡುತ್ತಿದ್ದಾರೆ. ಒಮ್ಮೆ ಪಾಸಿಟಿವ್ ಆದವರು, ನೆಗೆಟಿವ್‌ಗಾಗಿ ಪರೀಕ್ಷೆಗೊಳಪಡುತ್ತಾರೆ. ಕಚೇರಿಯೊಂದರಲ್ಲಿ ಒಬ್ಬರು ಪಾಸಿಟಿವ್ ಆದರೆ; ಇಡೀ ಕಚೇರಿ ಸಿಬ್ಬಂದಿಯೇ ತಪಾಸಣೆಗೊಳಗಾಗುತ್ತಿದೆ. ಇಂತಹದ್ದಕ್ಕೆ ಕಡಿವಾಣ ಹಾಕಲು ತಪಾಸಣೆಯನ್ನು ಸರ್ಕಾರವೇ ಕಡಿಮೆಗೊಳಿಸಿದೆ’ ಎಂದು ಅವರು ಮಾಹಿತಿ ನೀಡಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ₹ 800 ಮಾತ್ರ ಶುಲ್ಕವಾಗಿ ಪಡೆಯಬೇಕು. ಹೆಚ್ಚಿಗೆ ಪಡೆದರೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿ. ಅವರು ಕ್ರಮ ಜರುಗಿಸಲಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.