ADVERTISEMENT

ಕೇಸರಿ ಬಣ್ಣ ಒಂದು ಪಕ್ಷದ ಸ್ವತ್ತಲ್ಲ: ಶಾಸಕ ಸಾ.ರಾ. ಮಹೇಶ್‌

ನನ್ನ ಬಗ್ಗೆ ಜೆಡಿಎಸ್‌ ವರಿಷ್ಠರಿಗೆ ನಂಬಿಕೆ ಇದೆ: ಸಾ.ರಾ. ಮಹೇಶ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 5:57 IST
Last Updated 9 ಅಕ್ಟೋಬರ್ 2021, 5:57 IST
ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಮಹಿಳಾ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಪರಿಶೀಲಿಸಿದರು
ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಮಹಿಳಾ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಪರಿಶೀಲಿಸಿದರು   

ಕೆ.ಆರ್.ನಗರ: ‘ಕೇಸರಿ ಬಣ್ಣ ಯಾವುದೇ ಒಂದು ಪಕ್ಷದ ಸ್ವತ್ತಲ್ಲ. ಅದು ಈ ದೇಶದ ಧಾರ್ಮಿಕ ಭಾವನೆಯ ಸಂಕೇತವಾಗಿದೆ’ ಎಂದು ಶಾಸಕ ಸಾ.ರಾ.ಮಹೇಶ್ ಇಲ್ಲಿ ಶುಕ್ರವಾರ ಹೇಳಿದರು.

ಪಟ್ಟಣದಲ್ಲಿ ನಿರ್ಮಾಣ ಹಂತ ದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಯ ಪರಿಶೀಲನೆ ವೇಳೆ, ಮೈಸೂರಿನ ಕೆ.ಆರ್. ಕ್ಷೇತ್ರದ ವಿದ್ಯಾರಣ್ಯಪುರಂ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ ‘ಮೋದಿ ಯುಗ ಉತ್ಸವ’ದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಲ್ಗೊಂಡ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

‘ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದರು. ಹಾಗಿದ್ದರೆ ಅವರು ರೈತ ಸಂಘದವರಾ? ಕೇಸರಿ ಶಾಲು, ಕೇಸರಿ ಬಣ್ಣ, ಕೇಸರಿ ಕುಂಕುಮ ಇವೆಲ್ಲವೂ ಧಾರ್ಮಿಕ ಭಾವನೆಯ ಸಂಕೇತಗಳಾಗಿವೆ’ ಎಂದು ಹೇಳಿದರು.

ADVERTISEMENT

‘ನರೇಂದ್ರ ಮೋದಿ ಈ ದೇಶದ ಪ್ರಧಾನಿ. ಅವರು ಯಾವುದೇ ಪಕ್ಷದ ಸ್ವತ್ತಲ್ಲ. ಎಸ್.ಎ.ರಾಮದಾಸ್ ಮತ್ತು ನನ್ನ ಸ್ನೇಹ 30 ವರ್ಷಗಳ ಹಳೆಯದು. ಮೋದಿ ಅವರ ಹೆಸರಿನಲ್ಲಿ ಸವಲತ್ತು ವಿತರಿಸುವ ಸರ್ಕಾರಿ ಕಾರ್ಯಕ್ರಮವಾಗಿತ್ತು. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಎಸ್‌.ಎ. ರಾಮದಾಸ್ ಅವರು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಆದ್ದರಿಂದ ಕಾರ್ಯಕ್ರಮಕ್ಕೆ ಹೋಗಿದ್ದೆ’ ಎಂದು ಸ್ಪಷ್ಟಪಡಿಸಿದರು.

‘ಯಾವ ಪಕ್ಷದವರೇ ಆಗಿರಲಿ, ಪ್ರಧಾನಿ, ಮುಖ್ಯಮಂತ್ರಿಗೆ ಶುಭ ಕೋರುವುದು ನಮ್ಮ ಜವಾಬ್ದಾರಿ. ರಾಜಕೀಯ ಬಂದಾಗ ರಾಜಕಾರಣ ಮಾಡೋಣ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನರೇಂದ್ರ ಮೋದಿ ಶುಭಾಶಯ ಕೋರುವುದಿಲ್ಲವೇ? ಹಾಗಾಗಿ ನಾನು ಕೂಡ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಪತ್ರ ಬರೆದಿದ್ದೇನೆ. ಇದು ತಪ್ಪಲ್ಲ’ ಎಂದರು.

‘ನಾನು ಎಲ್ಲಿಯವರೆಗೆ ಸಾರ್ವಜನಿಕ ಜೀವನದಲ್ಲಿ ಇರುತ್ತೇನೆಯೋ ಅಲ್ಲಿಯವರೆಗೆ ನನಗೆ ಗೊತ್ತಿರುವುದು ಕುಮಾರಸ್ವಾಮಿ, ದೇವೇಗೌಡರು ಮತ್ತು ಜೆಡಿಎಸ್ ಚಿಹ್ನೆ. ನನ್ನ ಬಗ್ಗೆ ನಮ್ಮ ನಾಯಕರಿಗೆ ನಂಬಿಕೆ ಇದೆ’ ಎಂದು ಹೇಳಿದರು.

‘ಐಟಿ ಸೇರಿದಂತೆ ಯಾವುದೇ ದಾಳಿ ಇರಲಿ, ಮಾಹಿತಿ ಇಲ್ಲದೇ ಯಾರೂ ದಾಳಿ ಮಾಡುವುದಿಲ್ಲ. ಸಂಬಂಧಪಟ್ಟ ವ್ಯಕ್ತಿಯ ಚಲನವಲನಗಳನ್ನು ಹಲವು ದಿನಗಳಿಂದ ಗಮನಿಸಿ ದಾಳಿ ಮಾಡುತ್ತಾರೆ. ದಾಳಿಯಾದ ತಕ್ಷಣ ಆತಂಕ ಯಾಕೆ? ಕಪ್ಪುಹಣ ಇದ್ದರೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲದಿದ್ದರೆ ಬಿಟ್ಟು ಹೋಗುತ್ತಾರೆ. ಅದು ದೊಡ್ಡ ವಿಚಾರವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.