ADVERTISEMENT

ರಾಮಕೃಷ್ಣರ ಜೀವನ ಕಥನ ‘ಸಮಚಿತ್ತದ ಸಮದರ್ಶಿ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:33 IST
Last Updated 11 ಸೆಪ್ಟೆಂಬರ್ 2020, 2:33 IST
ಕಾರ್ಯಕ್ರಮದಲ್ಲಿ ಸು.ರಾಮಣ್ಣ ಅವರು ‘ಸಮಚಿತ್ತದ ಸಮದರ್ಶಿ’ ಪುಸ್ತಕ ಬಿಡುಗಡೆ ಮಾಡಿದರು. ಡಾ.ಬಿ.ವಿ.ವಸಂತಕುಮಾರ್, ಡಾ.ಸಿ.ಬಸವರಾಜು, ಡಾ.ವಿ.ರಂಗನಾಥ್‌ ಪಾಲ್ಗೊಂಡಿದ್ದರು
ಕಾರ್ಯಕ್ರಮದಲ್ಲಿ ಸು.ರಾಮಣ್ಣ ಅವರು ‘ಸಮಚಿತ್ತದ ಸಮದರ್ಶಿ’ ಪುಸ್ತಕ ಬಿಡುಗಡೆ ಮಾಡಿದರು. ಡಾ.ಬಿ.ವಿ.ವಸಂತಕುಮಾರ್, ಡಾ.ಸಿ.ಬಸವರಾಜು, ಡಾ.ವಿ.ರಂಗನಾಥ್‌ ಪಾಲ್ಗೊಂಡಿದ್ದರು   

ಮೈಸೂರು: ನಗರದ ಅಶೋಕಪುರಂ ಮತ್ತು ಕೃಷ್ಣಮೂರ್ತಿಪುರಂ ಪ್ರದೇಶಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಾಮಾಜಿಕ, ಸಾಮರಸ್ಯದ ಹೋರಾಟದ ನೆಲೆಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಅಶೋಕಪುರಂನ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಘ ಮತ್ತು ಯುವಜನ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಸಮಚಿತ್ತದ ಸಮದರ್ಶಿ’ (ರಾಮಕೃಷ್ಣರ ಜೀವನ ಕಥನ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಕೃಷ್ಣ, ಮ. ವೆಂಕಟರಾಂ ಮತ್ತು ಶ್ರೀನಿವಾಸಪ್ರಸಾದ್ ಅವರು ಅಶೋಕಪುರಂನಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗೆ ಚಾಲನೆ ನೀಡಿದ್ದರು. ಹಲವರ ವಿರೋಧದ ನಡುವೆಯೂ ಸಂಘದ ಸಿದ್ಧಾಂತಗಳನ್ನು ಅಲ್ಲಿನ ಜನರಿಗೆ ಮನದಟ್ಟು ಮಾಡಿದ್ದರು ಎಂದರು.

ADVERTISEMENT

ಆರ್‌ಎಸ್‌ಎಸ್‌ ಒಂದು ಜಾತಿಯ ಕಾರ್ಯಕರ್ತರನ್ನು ಮಾತ್ರ ನಿರ್ಮಾಣ ಮಾಡಿಲ್ಲ. ಜಾತಿಯ ಎಲ್ಲೆಯನ್ನು ಮೀರಿ ಕೆಲಸ ಮಾಡಿದೆ. ಈ ಪುಸ್ತಕ ಕೇವಲ ರಾಮಕೃಷ್ಣ ಅವರ ಜೀವನ ಚರಿತ್ರೆಯಾಗಿ ಉಳಿದಿಲ್ಲ. ಸಾಮಾಜಿಕ ಸಾಮರಸ್ಯಕ್ಕಾಗಿ ಬದುಕಿದ ವ್ಯಕ್ತಿಯ ಜೀವನದ ಕಥೆಯನ್ನು ಹೇಳುತ್ತದೆ. ಕರ್ನಾಟಕದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಕ್ಕೆ ಇದು ಅತ್ಯುತ್ತಮ ದಾಖಲೆಯಾಗಿದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಕಾನೂನು ಶಾಲೆ, ನ್ಯಾಯಶಾಸ್ತ್ರ ವಿಭಾಗದ ನಿರ್ದೇಶಕ ಡಾ.ಸಿ.ಬಸವರಾಜು ಮಾತನಾಡಿ, ‘ಆರ್‌ಎಸ್‌ಎಸ್‌ ಮಾತ್ರ ವೈಯಕ್ತಿಕ ಲಾಭದ ಉದ್ದೇಶ ಇಟ್ಟುಕೊಳ್ಳದೆ, ಇಡೀ ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ರಾಮಕೃಷ್ಣ ಅವರ ಜೀವನ ಕಥನ ಮುಂದಿನ ತಲೆಮಾರಿನ ಜನರಿಗೆ ದಾರಿದೀಪದಂತಿದೆ ಎಂದು ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ನಿಧನರಾದ ರಾಮಕೃಷ್ಣ ಅವರ ಬಗ್ಗೆ ಬರೆದ ಲೇಖನ ಮಾಲೆಯನ್ನು ‘ಸಮಚಿತ್ತದ ಸಮದರ್ಶಿ’ ಪುಸ್ತಕ ಒಳಗೊಂಡಿದೆ. ಅಶೋಕಪುರಂ ಗೋವಿಂದರಾಜು ಅವರು ಪ್ರಧಾನ ಲೇಖಕರಾಗಿದ್ದಾರೆ.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತದ ಸಂಘಚಾಲಕ ಮ.ವೆಂಕಟರಾಂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್, ಮೈಸೂರಿನ ಅಧ್ಯಕ್ಷ ಡಾ.ವಿ.ರಂಗನಾಥ್, ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಎಸ್‌.ಆನಂದ ಮೂರ್ತಿ, ಅಶೋಕಪುರಂ ಯುವಜನ ಸಂಘದ ಕಾರ್ಯದರ್ಶಿ ಯೋಗೀಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.