ಮೈಸೂರು: ‘ಕಾಂಗ್ರೆಸ್‌ನ ರಾಜಕೀಯ ದ್ವೇಷಕ್ಕೆ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳು ಬಲಿಯಾಗದಿರಲಿ’ ಎಂದು ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.
‘ರಾಜ್ಯದ ವಿವಿಧೆಡೆ ಇರುವ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಸುಮಾರು 140ಕ್ಕೂ ಹೆಚ್ಚು ಜನೌಷಧ ಮಳಿಗೆ ಮುಚ್ಚುವಂತೆ ಸರ್ಕಾರ ಆದೇಶಿಸಿರುವುದು ಜನ ವಿರೋಧಿ ಕ್ರಮವಾಗಿದೆ’ ಎಂದು ದೂರಿದ್ದಾರೆ.
‘ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ಮಾರಾಟ ಮಾಡುತ್ತಿದ್ದ ಜನೌಷಧ ಕೇಂದ್ರ ಮುಚ್ಚಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಡರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ರಾಜ್ಯ ಸರ್ಕಾರ, ಪ್ರಧಾನಿ ಹೆಸರಿನಲ್ಲಿ ಔಷಧ ಮಳಿಗೆ ಇರುವುದು ಸಹಿಸದೆ, ಸೇಡಿನ ಕ್ರಮ ಅನುಸರಿಸುತ್ತಿರುವುದು ನಾಚಿಗೆಕೇಡಿನ ಸಂಗತಿ’ ಎಂದು ಕಿಡಿಕಾರಿದ್ದಾರೆ.
‘ಕಡಿಮೆ ದರಕ್ಕೆ ಬಡರೋಗಿಗಳಿಗೆ ಔಷಧಗಳು ಲಭ್ಯವಾಗಲೆಂದು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಮಳಿಗೆ ತೆರೆಯಲಾಗಿತ್ತು. ಆದರೆ ರೋಗಿಗಳ ಪಾಲಿಗೆ ವರದಾನವಾಗಿದ್ದ ಮಳಿಗೆ ಏಕಾಏಕಿ ಮುಚ್ಚಿಸುತ್ತಿರುವುದು ಅನ್ಯಾಯ. ಜನರ ತೆರಿಗೆ ಹಣದ ಕಾಳಜಿ ಇದ್ದರೆ ಜನೌಷಧ ಕಂಪನಿಗಳಿಂದ ಔಷಧ ಖರೀದಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಿದರೆ, ಕಮಿಷನ್ ದಂಧೆಗೂ ಕಡಿವಾಣ ಬೀಳಲಿದೆ. ಸರ್ಕಾರಕ್ಕೂ ಕೋಟ್ಯಂತರ ಉಳಿತಾಯವಾಗಲಿದೆ’ ಎಂದಿದ್ದಾರೆ.
‘ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಾಗಿರುವ ಔಷಧಗಳನ್ನು ಸರಬರಾಜು ಮಾಡುತ್ತಿದ್ದೆವೆಯೇ ಎಂಬುದರ ಬಗ್ಗೆ ಆರೋಗ್ಯ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಭಾರತೀಯ ಜನೌಷಧ ಮಳಿಗೆ ಮುಚ್ಚಿಸುವ ಆದೇಶ ಪುನರ್ ಪರಿಶೀಲಿಸಬೇಕು’ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.