ಮೈಸೂರು: ‘1970–80ರ ದಶಕದಲ್ಲಿ ನಮ್ಮ ನಡುವೆ ಸ್ತ್ರೀವಾದವನ್ನು ಹಚ್ಚಿದವರು, ತಮ್ಮ ಬದುಕು–ಬರಹ ಎರಡರಲ್ಲೂ ಅದನ್ನೇ ಬಿತ್ತಿದವರು ವಿಜಯಾ ದಬ್ಬೆ’ ಎಂದು ಲೇಖಕಿ ನೇಮಿಚಂದ್ರ ಸ್ಮರಿಸಿದರು.
ಸಮತಾ ಅಧ್ಯಯನ ಕೇಂದ್ರವು ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಕಾವ್ಯ ಮತ್ತು ಕಥಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಜಯಾ ಅವರ ಬರಹಗಳಿಗೆ ಅರ್ಧ ಶತಮಾನವಾದರೂ ಅವರ ಕೃತಿಗಳಲ್ಲಿನ ಧ್ವನಿ ಹಾಗೆಯೇ ಇದೆ. ಸ್ತ್ರೀಯರಿಗೆ ಸಮಾನ ಅವಕಾಶ, ಸ್ಥಾನಮಾನವೇ ಸ್ತ್ರೀವಾದದ ಪ್ರಮುಖ ಉದ್ದೇಶ. ಅದು ಮಾನವತಾವಾದದ ಒಂದು ಭಾಗ ಎಂಬುದು ಅವರ ನಂಬಿಕೆ ಆಗಿತ್ತು. ವಿಜಯಾ ಅವರ ಕವನಗಳು ತಾವು ನಂಬಿದ್ದ ಸಿದ್ಧಾಂತಗಳ ತುಣುಕುಗಳಾಗಿದ್ದವು. ವರದಕ್ಷಿಣೆ ಪದ್ಧತಿಯ ವಿರುದ್ಧವಾಗಿ ಅಂದೇ ಧ್ವನಿ ಎತ್ತಿದ್ದರು. ಇವತ್ತಿಗೂ ಆ ಪಿಡುಗು ಬೇರೆ ಬೇರೆ ರೂಪದಲ್ಲಿ ನಮ್ಮನ್ನು ಕಾಡುತ್ತಿದೆ’ ಎಂದು ವಿವರಿಸಿದರು.
‘ಸ್ತ್ರೀಯರಾಗಿ ಹುಟ್ಟಿದ ತಕ್ಷಣ ಸ್ತ್ರೀವಾದಿ ಆಗುವುದಿಲ್ಲ. ಅದೊಂದು ತಾತ್ವಿಕ ನೆಲೆ. ಸ್ತ್ರೀವಾದಿ ಪುರುಷರೂ ನಮ್ಮ ನಡುವೆ ಇದ್ದಾರೆ ಎಂಬುದು ವಿಜಯಾ ಅವರ ಆಲೋಚನೆ ಆಗಿತ್ತು’ ಎಂದು ನೆನೆದರು.
ಸ್ತ್ರೀವಾದ ಪರಿಚಯಿಸಿದವರು:
ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಮೊಗ್ಗದ ಕವಯತ್ರಿ ಸವಿತಾ ನಾಗಭೂಷಣ, ‘ವಿಜಯಾ ನಮಗೆಲ್ಲ ಸ್ತ್ರೀವಾದವನ್ನು ಪರಿಚಯಿಸಿದವರು. ಸ್ತ್ರೀವಾದದ ಪ್ರಖರತೆಯ ಬೆಳಕಾಗಿ ಕಾಣುತ್ತಿರುವಾಗಲೇ ಅಪಘಾತಕ್ಕೆ ಈಡಾದರು’ ಎಂದು ಸ್ಮರಿಸಿದರು.
‘ಮಹಿಳೆಯರ ಕಾವ್ಯವನ್ನು ಯಾರೂ ವಿಮರ್ಶೆ ಮಾಡುವುದಿಲ್ಲ. ಕಿರಿಯರು ಹಿರಿಯರ ಬರಹಗಳನ್ನು ವಿಮರ್ಶಿಸಬೇಕು. ಕಾವ್ಯ ಕಟ್ಟುವುದು ಮನೆ ಕಟ್ಟುವಂತೆಯೇ ಒಂದು ರಚನೆ. ಆ ಮನೆಯೊಳಗೆ ಜೀವ ಸಂಚಾರ ಆದಾಗ ಮಾತ್ರ ಅದು ಕಾವ್ಯ ಆಗುತ್ತದೆ. ಕವಿತೆ ಎಂಬುದು ಒಂದು ನಿವೇದನೆ. ಭಕ್ತ ಮತ್ತು ದೇವರ ನಡುವಿನ ಸಂಬಂಧ ಇದ್ದಂತೆ’ ಎಂದು ವಿವರಿಸಿದರು.
ಕಾವ್ಯ ಹಾಗೂ ಕಥಾ ಸ್ಪರ್ಧೆಯ ತೀರ್ಪುಗಾರರ ಪರವಾಗಿ ಲೇಖಕ ಜಿ.ಪಿ. ಬಸವರಾಜು ಮಾತನಾಡಿದರು. ‘ವಿಜಯಾ ದಬ್ಬೆ ಅವರದು ಯಾರಿಗೂ ಕೇಡು ಬಯಸದ ನಿರ್ಲಿಪ್ತ ಮನಸ್ಸು. ಅವರ ಸಾಹಿತ್ಯದಲ್ಲಿ ಆರ್ಭಟ, ಅಹಂಕಾರ ಇರಲಿಲ್ಲ. ಜೋರಾದ ಪ್ರತಿಭಟನೆ ಕಾಣಲಿಲ್ಲ. ಬುದ್ಧನ ಕರುಣೆ, ಪ್ರೀತಿ ಭಾವಗಳಿಗೆ ಅಕ್ಷರದ ತೋರಣ ಕಟ್ಟಿದರು. ಇಡೀ ಜಗತ್ತನ್ನು ಪ್ರೀತಿಯಲ್ಲಿ ಪೊರೆಯಬಹುದು ಎಂಬುದನ್ನು ಪ್ರತಿಪಾದಿಸಿದರು’ ಎಂದು ಸ್ಮರಿಸಿದರು.
‘ನೆನಪಿನಂಗಳದಲ್ಲಿ ವಿಜಯಾ ದಬ್ಬೆ’ ಕೃತಿಯನ್ನು ವಿಮರ್ಶಕಿ ಎಂ.ಎಸ್. ಆಶಾದೇವಿ ಬಿಡುಗಡೆ ಮಾಡಿದರು. ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸೆಲ್ವಕುಮಾರಿ, ಶಾರದಾವಿಲಾಸ ಕಾಲೇಜು ಸಹಾಯಕ ಪ್ರಾಧ್ಯಾಪಕ ಆನಂದ ಗೋಪಾಲ, ಕೇಂದ್ರದ ಉಪಾಧ್ಯಕ್ಷೆ ವಿಜಯಾ ರಾವ್, ಕಾರ್ಯದರ್ಶಿ ಆರ್. ಸುನಂದಮ್ಮ, ಸಹ ಕಾರ್ಯದರ್ಶಿ ಪಿ. ಓಂಕಾರ್, ಕೋಶಾಧಿಕಾರಿ ಎಚ್.ಎಂ. ಕಲಾಶ್ರೀ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.