ADVERTISEMENT

ಹೈಟೆಕ್ ಶೌಚಾಲಯದ ಅಂದವ ನೋಡಿ...

ರಮೇಶ ಕೆ
Published 2 ನವೆಂಬರ್ 2018, 19:45 IST
Last Updated 2 ನವೆಂಬರ್ 2018, 19:45 IST
ಶೌಚಾಲಯದ ಮಾದರಿ
ಶೌಚಾಲಯದ ಮಾದರಿ   

ಸ್ಟೇನ್‌ಲೆಸ್‌ ಸ್ಟೀಲ್‌ನಿಂದ ಮಾಡಿದ ಒಳಾಂಗಣ ವಿನ್ಯಾಸ, ನೈರ್ಮಲ್ಯ ಅಳೆಯಲು ಮಾಪನ, ವಾಟರ್‌ ಎಟಿಎಂ, ಸ್ಮಾರ್ಟ್‌ ಕಾರ್ಡ್‌, ಸ್ಯಾನಿಟರ್‌ ನ್ಯಾಪ್‌ಕಿನ್‌ ಮಷಿನ್‌, ಹಾಲುಣಿಸುವ ಕೊಠಡಿ, ವಾಹನ ನಿಲ್ದಾಣ ಹಾಗೂ ಫೀಡ್‌ಬ್ಯಾಕ್‌ ಸಿಸ್ಟಂ...

ಇವಿಷ್ಟೂ ಯಾವುದೋ ಐಷಾರಾಮಿ ಹೋಟೆಲ್‌ನಲ್ಲಿ ಸಿಗುವ ಸೌಲಭ್ಯವಲ್ಲ, ಮೈಸೂರು ಮಹಾನಗರ ಪಾಲಿಕೆಯು ರಾಜ್ಯ ರಸ್ತೆ ಸಾರಿಗೆ ಬಸ್‌ ನಿಲ್ದಾಣದ ಎದುರು ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ಶೌಚಾಲಯದ ನೋಟ.

‘ಸ್ವಚ್ಛನಗರ ಮೈಸೂರು’ ಪಟ್ಟವನ್ನು ಉಳಿಸಿಕೊಳ್ಳಲು ಮಹಾನಗರ ಪಾಲಿಕೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ.

ADVERTISEMENT

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ದೇಶದ ಮೂರು ನಗರಗಳನ್ನು ಆಯ್ಕೆ ಮಾಡಿಕೊಂಡು ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಟ್ಟಿದೆ. ಮೊದಲ ಹಂತದಲ್ಲಿ ಮೈಸೂರು, ಗಾಜಿಯಾಬಾದ್‌ ಹಾಗೂ ಉದಯಪುರದಲ್ಲಿ ಹೈಟೆಕ್‌ ಶೌಚಾಲಯ ತಲೆಎತ್ತಲಿವೆ.

ಮಹಾನಗರ ಪಾಲಿಕೆಯು ಈಗಾಗಲೇ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ ಎದುರಿನ ಟ್ಯಾಕ್ಸಿ ಸ್ಟಾಂಡ್‌ ಬಳಿ ಸ್ಥಳವನ್ನು ಗುರುತಿಸಿದೆ. ₹37 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ತಯಾರಿಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಶೌಚಾಲಯ ಇದಾಗಿದ್ದು, 60X50 ಜಾಗದಲ್ಲಿ ನಿರ್ಮಾಣವಾಗಲಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅವರೇ ಯೋಜನೆ ರೂಪಿಸಿಕೊಡುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಆರ್ಕಿಟೆಕ್ಚರ್‌ ಪ್ಲಾನ್‌ ಕೂಡ ಕೊಡುತ್ತಾರೆ. ನಿರ್ಮಾಣ ಮಾಡಲು ಆಯೋಜಕರಿಗಾಗಿ ಕಾಯುತ್ತಿದ್ದೇವೆ. ಸಿಗದಿದ್ದರೆ ತಡಮಾಡದೇ ಪಾಲಿಕೆ ಅನುದಾನ ಬಳಸಿಕೊಂಡು ಶೌಚಾಲಯ ಕಟ್ಟಲಾಗುತ್ತದೆ. ಇದಾದ ನಂತರ ಮತ್ತೊಂದು ಕಡೆ ಇದೇ ಮಾದರಿಯ ಹೈಟೆಕ್‌ ಶೌಚಾಲಯ ನಿರ್ಮಿಸುವ ಯೋಜನೆಯಿದೆ ಎಂದು ಮಾಹಿತಿ ನೀಡುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜು.

ನಗರದಲ್ಲಿವೆ 65 ಶೌಚಾಲಯಗಳು
ಮೈಸೂರಿನಲ್ಲಿ ಒಟ್ಟು 65 ಶೌಚಾಲಯಗಳಿವೆ. 14 ಇ– ಶೌಚಾಲಯಗಳು ಹಾಗೂ 12 ಸಮುದಾಯ ಶೌಚಾಲಯಗಳಿವೆ. ಪ್ರವಾಸಿಗರಿಗೆ ಅನುಕೂಲವಾಗಲೆಂದು ‘ಮೈಸೂರು ಪಬ್ಲಿಕ್‌ ಟಾಯ್ಲೆಟ್‌ ಲೊಕೇಟರ್‌ ಆ್ಯಪ್‌’ ಇದೆ. ಪ್ರವಾಸಿಗರು ಇರುವ ಜಾಗದ ಸುತ್ತಮುತ್ತ ಹತ್ತಿರದಲ್ಲಿ ಶೌಚಾಲಯದ ಬಗ್ಗೆ ಮಾಹಿತಿ ನೀಡುತ್ತದೆ. ನೀರಿನ ಸಮಸ್ಯೆ, ವಿದ್ಯುತ್‌ ಹಾಗೂ ಶುಚಿತ್ವ ಇಲ್ಲದಿದ್ದರೆ ಕೆಂಪು ಬಟನ್‌ ಒತ್ತಬಹುದು. ಅದು ನೇರವಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ನಿಯಂತ್ರಣ ಕೊಠಡಿಗೆ ಮಾಹಿತಿ ಹೋಗುತ್ತದೆ. ಅಲ್ಲಿಂದ ನಮಗೆ ಮಾಹಿತಿ ಬರುತ್ತದೆ. ಎಷ್ಟು ಜನ ಶೌಚಾಲಯ ಉಪಯೋಗಿಸಿದ್ದಾರೆ ಎಂಬ ಬಗ್ಗೆಯೂ ಅಂಕಿಅಂಶ ಲಭ್ಯವಾಗುತ್ತದೆ ಎನ್ನುತ್ತಾರೆ ನಾಗರಾಜು.

ಪ್ರವಾಸಿಗರು ಹಾಗೂ ಜನಸಂಖ್ಯೆ ಹೆಚ್ಚಿರುವ ಸ್ಥಳಗಳನ್ನು ಸಮೀಕ್ಷೆ ಮಾಡಿ ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ವರ್ಷವೂ ಎಲ್ಲೆಲ್ಲಿ ಅಗತ್ಯವಿದೆ ಎಂಬುದನ್ನು ನೋಡಿಕೊಂಡು ಹೊಸದಾಗಿ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ.

ಹೆಚ್ಚುವರಿ ಸಮಯ
ರೈಲ್ವೆ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳ ಬಳಿಯ ಶೌಚಾಲಯಗಳು ಬೆಳಿಗ್ಗೆ 6ರಿಂದ 10ರವರೆಗೆ ತೆರೆಯಲಾಗುತ್ತಿತ್ತು. ಈಗ ಬೆಳಿಗ್ಗೆ 4ರಿಂದ ರಾತ್ರಿ 11ರವರೆಗೂ ಮುಕ್ತವಾಗಿರುತ್ತದೆ ಎಂದು ಹೇಳುತ್ತಾರೆ ನಾಗರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.