ADVERTISEMENT

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; 10 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 10:13 IST
Last Updated 21 ಆಗಸ್ಟ್ 2019, 10:13 IST

ಮೈಸೂರು: 9, 10 ಹಾಗೂ 11 ವರ್ಷ ವಯಸ್ಸಿನ ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನವಾಜ್ (30) ಎಂಬಾತನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹ 1.60 ಲಕ್ಷ ದಂಡ ವಿಧಿಸಿದೆ.

ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಯರಿಗೆ ₹ 3 ಲಕ್ಷ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ.

ಘಟನೆ ವಿವರ: ಮೂವರು ಬಾಲಕಿಯರು 2016ರ ಮಾರ್ಚ್ 4ರಂದು ನಗರದ ಉದ್ಯಾನದಲ್ಲಿ ಆಟವಾಡುತ್ತಿರುವಾಗ ಪರಿಚಯಸ್ಥನಾಗಿದ್ದ ನವಾಜ್ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ. ಈ ವೇಳೆ ನವಾಜ್ ಪತ್ನಿ ಮತ್ತು ಮಕ್ಕಳು ಮನೆಯಲ್ಲಿರಲಿಲ್ಲ.

ADVERTISEMENT

ಬಾಲಕಿಯರು ಮನೆಗೆ ಬಂದ ಮೇಲೆ ತಮ್ಮ ತಮ್ಮ ತಾಯಿ, ತಂದೆಯರಿಗೆ ವಿಷಯ ತಿಳಿಸಿದ್ದಾರೆ. ಇವರಲ್ಲಿ ಒಬ್ಬ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ನವಾಜ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.

ವಿಚಾರಣೆ ಸಮಯದಲ್ಲಿ ದೂರು ನೀಡಿದ ಬಾಲಕಿಯ ತಾಯಿ ಹಾಗೂ ನೊಂದ ಮೂವರೂ ಬಾಲಕಿಯರು ಘಟನೆ ನಡೆದೇ ಇಲ್ಲ ಎಂದು ಹೇಳಿದರು. ಆದರೆ, ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ತನಿಖಾ ಕಾಲದಲ್ಲಿ ನೊಂದ ಬಾಲಕಿಯರು ಮಹಿಳಾ ಪೊಲೀಸ್ ಅಧಿಕಾರಿ ಮುಂದೆ, ವೈದ್ಯಕೀಯ ಪರೀಕ್ಷೆ ಸಮಯದಲ್ಲಿ ವೈದ್ಯರಿಗೆ ಹಾಗೂ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳನ್ನು ಪರಿಗಣಿಸಿದರು. ಜತೆಗೆ, ವೈದ್ಯರು ಮತ್ತು ಪೊಲೀಸರ ಸಾಕ್ಷ್ಯಾಧಾರಗಳನ್ನು ಗಣನೆಗೆ ತೆಗೆದುಕೊಂಡು ಈ ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಸಿ.ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.