ADVERTISEMENT

ಸಿದ್ದರಾಮಯ್ಯಗೆ ಶಕ್ತಿ ತುಂಬಿ: ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:15 IST
Last Updated 18 ಜುಲೈ 2025, 4:15 IST
ಡಾ.ಡಿ.ತಿಮ್ಮಯ್ಯ
ಡಾ.ಡಿ.ತಿಮ್ಮಯ್ಯ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಆರ್ಥಿಕ ಶಕ್ತಿ ತುಂಬಿದ್ದು, ಒಳಮೀಸಲಾತಿ ಪರವಾಗಿರುವ ಸಿದ್ದರಾಮಯ್ಯ ಅವರನ್ನು ನಾವು ಬೆಂಬಲಿಸಿ ಶಕ್ತಿ ತುಂಬಬೇಕಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ನಗರದ ಜಲದರ್ಶಿನಿ ಅತಿಥಿಗೃಹ ಸಭಾಂಗಣದಲ್ಲಿ ಗುರುವಾರ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳು ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರು 500 ಕೋಟಿ ಬಾರಿ ಪ್ರಯಾಣ ಮಾಡಿದ್ದಾರೆ. ಧಾರ್ಮಿಕ, ಪ್ರವಾಸಿ ತಾಣಗಳಿಗೆ ತೆರಳಿ ದರ್ಶನ ಪಡೆದಿದ್ದಾರೆ. ಈ ಯೋಜನೆಯು ಹೆಣ್ಣು ಮಕ್ಕಳ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗಿದೆ’ ಎಂದರು.

ADVERTISEMENT

‘ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿ, ಜೆಡಿಎಸ್‌ನವರು ಉಚಿತ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತೇನೆ’ ಎಂದು ಮಹಿಳೆಯರಿಂದ ಹೇಳಿಸಲಿ‘ ಎಂದು ಸವಾಲು ಹಾಕಿದರು.

‘ಒಳಮೀಸಲಾತಿ ನೀಡಲು ಸಿದ್ದರಾಮಯ್ಯ ಅವರು ಸದಾ ಉತ್ಸುಕತೆಯಿಂದ ಇದ್ದು, ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ನಾಯಕರಿಂದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ’ ಎಂದು ನುಡಿದರು.

‘ರಾಜ್ಯದಲ್ಲಿ ಮಾದರ ಮಹಾಸಭಾ ಸದಸ್ಯತ್ವ ಆರಂಭಿಸಿದ್ದು, ತಾಲ್ಲೂಕಿನಿಂದ ಕನಿಷ್ಠ ನೂರು ಮಂದಿ ಸದಸ್ಯರನ್ನು ಮಾಡಬೇಕು.  ಸರ್ಕಾರದ ಸವಲತ್ತುಗಳು ಜನಸಂಖ್ಯೆಗೆ ಅನುಗುಣವಾಗಿ ದೊರೆಯಬೇಕಾದರೆ ನಮ್ಮ ಸಂಖ್ಯೆಯನ್ನು ಅರಿಯಬೇಕು. ಸಮಾಜದಲ್ಲೂ ಒಗ್ಗಟ್ಟಿನಿಂದ ಇರಬೇಕು’ ಎಂದರು.

ಮಾಜಿ ಮೇಯರ್‌ ನಾರಾಯಣ ಮಾತನಾಡಿ, ‘ರಾಜ್ಯದಾದ್ಯಂತ ಸಾಧನಾ ಸವಾವೇಶ ಆಯೋಜಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಜು.19ರಂದು ಮೈಸೂರು ವಿಭಾಗದ ಸವಾವೇಶ ನಡೆಯುತ್ತಿದೆ. ಸಮುದಾಯದ ಜನರು ಹೆಚ್ಚಾಗಿ ಸೇರಬೇಕು’ ಎಂದು ಸಲಹೆ ನೀಡಿದರು.

ಮಾದಿಗ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಎಡತೊರೆ ನಿಂಗರಾಜು, ಚಾಮರಾಜನಗರ ಜಿಲ್ಲಾ ಆದಿಜಾಂಬವ ಮಹಾಸಭಾದ ಅಧ್ಯಕ್ಷ ಎಂ.ಶಿವಮೂರ್ತಿ, ವಿಜಯಶಂಕರ್, ರಾಮು, ಶಿವಣ್ಣ, ಪ್ರಕಾಶ್, ನಾಗರಾಜು, ರೇವಣ್ಣ, ಜಯಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.