ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ 'ಮುಡಾ' ಕಚೇರಿ ಸಮೀಪದ ಎಂಜಿನಿಯರ್‌ಗಳ ಸಂಸ್ಥೆ ಎದುರಿನ ಜೆಎಲ್‌ಬಿ ರಸ್ತೆಯಲ್ಲಿ ಶುಕ್ರವಾರ ಪ್ರತಿಭಟಿಸಿದರು.
‘ಸಿದ್ದರಾಮಯ್ಯ ಅವರ ಪತ್ನಿ ಕಾನೂನಾತ್ಮಕವಾಗಿ ಪಡೆದ ನಿವೇಶನಗಳ ವಿಚಾರದಲ್ಲಿ ಬಿಜೆಪಿಯವರು, ಸಾರ್ವಜನಿಕವಾಗಿ ಅನಗತ್ಯ ತೇಜೋವಧೆ ಮಾಡುತ್ತಿದ್ದಾರೆ ಹಾಗೂ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ದೂರಿದರು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಧರಣಿ ನಡೆಸಿದ ಅವರು ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಮುತ್ತಿಗೆ ಹಾಕಲು ನಿರ್ಣಯಿಸಿದರು. ಕ್ರಾಫರ್ಡ್ ಭವನದ ಕಡೆಯಿಂದ ಮುಡಾಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಳಿಗೆ ತೆರಳಲು ಮುಂದಾದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಕಾಂಗ್ರೆಸ್ ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮೂರ್ತಿ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಹಾಗೂ ಕಾರ್ಯಕರ್ತರನ್ನು ಪೊಲೀಸರು ತಡೆದರು. ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಲು ಯತ್ನಿಸಿದಾಗ ತಳ್ಳಾಟ–ನೂಕಾಟ ನಡೆಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮನವೊಲಿಕೆಗೆ ಜಗ್ಗದೆ, ಕೆಲಕಾಲ ಜೋರು ಮಳೆಯಲ್ಲೇ ಕಾರ್ಯಕರ್ತರು ಪ್ರತಿಭಟಿಸಿದರು.
ವಾಗ್ವಾದ: ‘ಅಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದೇವೆ. ಹೀಗಾಗಿ, ನೀವೂ ಪ್ರತಿಭಟನೆ ಹಿಂಪಡೆದು ಸಹಕರಿಸಿ’ ಎಂದು ಪೊಲೀಸ್ ಅಧಿಕಾರಿಗಳು ಕೋರಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿಯವರಿಂದ ನಾವು ದಾಖಲೆ ಕೇಳಲೇಬೇಕು. ಅಲ್ಲಿಗೆ ಹೋಗಲು ಬಿಡಿ’ ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದರು. ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮುಕ್ಕಾಲು ತಾಸಿಗೂ ಹೆಚ್ಚು ಸಮಯ ವಾಗ್ವಾದ ನಡೆಯಿತು. ಬಳಿಕ, ನಗರ ಸಮಿತಿಯ ಅಧ್ಯಕ್ಷರ ಸೂಚನೆ ಮೇರೆಗೆ ಕಾರ್ಯಕರ್ತರು ಅಲ್ಲಿಂದ ತೆರಳಿದರು.
ಹಳೆಯ ಜಿಲ್ಲಾಧಿಕಾರಿ ಕಚೇರಿ ರಸ್ತೆ ಮಾರ್ಗವಾಗಿ ತೆರಳಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಆಗ ಅವರ ವಿರುದ್ಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
‘ಶಾಂತಿಯುತವಾಗಿ ಮಾತುಕತೆಗೆ ತೆರಳುತ್ತಿದ್ದೆವು. ಪೊಲೀಸರು ಅವಕಾಶ ಕೊಡಲಿಲ್ಲ; ಬಂಧಿಸದೇ ಅವಮಾನಿಸಿದರು. ಆದರೆ, ಬಿಜೆಪಿ ಮಾಡುತ್ತಿರುವ ದ್ವೇಷ ರಾಜಕಾರಣದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ಪರವಾಗಿ ನಾವೆಲ್ಲರೂ ಇದ್ದೇವೆ’ ಎಂದು ಲಕ್ಷ್ಮಣ ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವ ಕೋಟೆ ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಧರ್ಮಸೇನಾ, ಕಳಲೆ ಕೇಶವಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಮುಡಾ ಸದಸ್ಯರಾಗಿರುವ ನಗರದ ಕಾಂಗ್ರೆಸ್ ಶಾಸಕರು ಪಾಲ್ಗೊಂಡಿರಲಿಲ್ಲ.
‘ಅಘೋಷಿತ ನಿಷೇಧಾಜ್ಞೆ’!
ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಶುಕ್ರವಾರ ಏಕಕಾಲಕ್ಕೆ ಪ್ರತಿಭಟಿದ್ದರಿಂದ ಪೊಲೀಸರು ಮುಡಾ ಕಚೇರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಕೋಟೆ ನಿರ್ಮಿಸಿ ಕೈಗೊಂಡಿದ್ದ ‘ಅಘೋಷಿತ ನಿಷೇಧಾಜ್ಞೆ’ಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ನೇತೃತ್ವ ವಹಿಸಿದ್ದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ ‘ಮುಖ್ಯಮಂತ್ರಿ ಪತ್ನಿಯಿಂದ ಪಡೆದಿರುವ ಜಮೀನಿಗೆ ಮುಡಾದಿಂದ 75ಸಾವಿರ ಚದರ ಅಡಿ ನಿವೇಶನ ಕೊಡಬೇಕಿತ್ತು. ಆದರೆ 38ಸಾವಿರ ಚ.ಅಡಿ ನೀಡಿದೆ. ಕೊಟ್ಟಷ್ಟನ್ನೆ ಅವರು ಪಡೆದಿದ್ದಾರೆ. ಇದನ್ನೂ ಬಿಜೆಪಿಯವರು ಹಗರಣವೆಂದು ಬಿಂಬಿಸುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಸಿಎಂ ಪತ್ನಿಗೆ ನಿವೇಶನ ನೀಡಿದ್ದು ಹಗರಣವೇ ಅಲ್ಲ. ಸಿದ್ದರಾಮಯ್ಯ ಮೇಲೆ ಯಾವುದೇ ಕಳಂಕವಿಲ್ಲ’ ಎಂದು ಸಮರ್ಥಿಸಿಕೊಂಡರು.
ಬಿಜೆಪಿಯವರು ಚೆಕ್ ಮೂಲಕ ಹಣ ಪಡೆದು ಭ್ರಷ್ಟಾಚಾರ ಮಾಡಿರುವುದು ರಾಜ್ಯದ ಜನರಿಗೆ ಗೊತ್ತಿದೆ. ಅಂಥವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಪ್ರತಿಭಟಿಸಲು ಅವರಿಗೆ ನೈತಿಕತೆ ಇಲ್ಲ-ಕೆ.ವೆಂಕಟೇಶ್, ಪಶುಸಂಗೋಪನಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.