ಮೈಸೂರು: ‘ಹೈಕಮಾಂಡ್‌ಗೆ ತನ್ನ ಶಕ್ತಿ ಪ್ರದರ್ಶನ ಮಾಡಲು ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡುತ್ತಿದ್ದಾರೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಟೀಕಿಸಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಆಡಳಿತಕ್ಕೆ ಬಂದು ಮೇ ತಿಂಗಳಿಗೆ ಎರಡು ವರ್ಷವಾಗುತ್ತದೆ. ಆದರೆ ಸಿದ್ದರಾಮಯ್ಯನವರ ಕುರ್ಚಿಗೆ ಕುತ್ತು ಬಂದ ಕಾರಣ ಎರಡು ತಿಂಗಳ ನಂತರ ಸಮಾವೇಶ ನಡೆಸಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇ– ಖಾತಾ ಯೋಜನೆಯ ಹೆಸರಿನಲ್ಲಿ ಅಧಿಕಾರಿಗಳು ಹಣ ಮಾಡಲು ನಿಂತಿದ್ದಾರೆ. ನಗರದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಿರ್ಮಿಸಿದ್ದ ಹೊಸ ರಸ್ತೆಗಳನ್ನು ಅಗೆದು ಹೊಸತಾಗಿ ನಿರ್ಮಿಸುತ್ತಿದ್ದಾರೆ. ಆದರೆ ಹಲವು ಕಡೆಗಳಲ್ಲಿ ರಿಪೇರಿ ಆಗಬೇಕಿದ್ದ ರಸ್ತೆಗಳನ್ನು ಸರಿಪಡಿಸಿಲ್ಲ. ತನ್ನ ಆಪ್ತರಿಗೆ ಲಾಭ ಮಾಡುವ ಉದ್ದೇಶದಿಂದ ಈ ರೀತಿಯ ಗೊಂದಲಕಾರಿ ಕೆಲಸಗಳನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪಕ್ಷದ ನಗರ ವಕ್ತಾರ ಮೋಹನ್ ಮಾತನಾಡಿ, ‘ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಂಡಿರುವುದಷ್ಟೇ ಅವರ ಸಾಧನೆ. ಅದರ ಹೊರತಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಬದಲಾಗಿ ಅಪರಾಧಗಳು ಹೆಚ್ಚುತ್ತಿವೆ. ಪೊಲೀಸರಿಗೆ ಸ್ವಾತಂತ್ರ್ಯ ನೀಡದೆ, ಅವರ ಪಕ್ಷದ ನಾಯಕರ ಒತ್ತಡದಿಂದ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ದೂರಿದರು.
‘ಪಂಚ ಗ್ಯಾರಂಟಿ ಯಶಸ್ವಿಯಾಗಿದೆ ಎನ್ನುವ ಸುಳ್ಳು ಕಥೆ ಸೃಷ್ಟಿಸಿದ್ದಾರೆ. ಶಕ್ತಿ ಯೋಜನೆಗೆ ಹಣ ಹೂಡಿಕೆ ಮಾಡಲು ಎರಡು ವರ್ಷದಲ್ಲಿ ಐದು ಬಾರಿ ಪೆಟ್ರೋಲ್ ದರ ಹೆಚ್ಚಿಸಿದ್ದಾರೆ. ಅನ್ನಭಾಗ್ಯದ ಮೂಲಕ 15 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಆದರೆ ಈಗ ಕೇಂದ್ರ ಕೊಡುತ್ತಿರುವ ಐದು ಕೆ.ಜಿ ಅಕ್ಕಿಯನ್ನು ನಾವೇ ಕೊಟ್ಟಿದ್ದೇವೆ ಎಂದು ಬಿಂಬಿಸಿದ್ದಾರೆ. ಅಕ್ಕಿ ಸಾಗಣೆ ಮಾಡುವವರಿಗೆ ಹಣ ನೀಡುತ್ತಿಲ್ಲ ಎಂದು ಲಾರಿ ಚಾಲಕರು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದರು.
‘ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಇಲಾಖೆ ಸಿಬ್ಬಂದಿಗೆ ಪಿ.ಎಫ್ ನೀಡಲು ಗ್ರಾಹಕರಿಂದಲೇ ಹಣ ಸಂಗ್ರಹಿಸುವ ಕೆಟ್ಟ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಯುವನಿಧಿಗೆ ಅರ್ಜಿ ಸಲ್ಲಿಸಿದವರಿಗೆ ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಲವು ತಿಂಗಳಿಂದ ಹಣ ಬರುತ್ತಿಲ್ಲ. ಆದರೆ ಕೇಂದ್ರ ಸರ್ಕಾರ ಯುವಕರಿಗಾಗಿ ಮುದ್ರಾ ಯೋಜನೆಯಡಿ ₹10 ಲಕ್ಷ ಸಾಲ ನೀಡುತ್ತಿದೆ. ಸಾಧನೆ ಮಾಡದವರು ಸಮಾವೇಶ ಮಾಡುತ್ತಿದ್ದಾರೆ. ಸಾಧನೆ ಮಾಡಿರುವ ಕೇಂದ್ರ ಸರ್ಕಾರ ಎಲ್ಲಾ ಸೌಲಭ್ಯ ಒದಗಿಸಿ ತನ್ನ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ಯೋಜನೆಯಡಿ ಸೋಲಾರ್ ಪ್ಯಾನಲ್ ಅಳವಡಿಸಿದವರಿಗೆ ಗೃಹಜ್ಯೋತಿ ಸೌಲಭ್ಯ ನೀಡುತ್ತಿಲ್ಲ. ವಿದ್ಯುತ್ ಉಳಿಸುವವರಿಗೆ ಉತ್ತೇಜನ ನೀಡುವ ಬದಲು ಹೆಚ್ಚು ಖರ್ಚು ಮಾಡುವವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲಾ ಯೋಜನೆಗೂ ಜನರಿಂದಲೇ ಹಣ ಕಸಿಯುವುದಿದ್ದರೆ ಅದಕ್ಕೆ ಉಚಿತದ ಹೆಸರೇಕೆ’ ಎಂದು ಪ್ರಶ್ನಿಸಿದರು.
‘ಆರ್‌ಸಿಬಿ ದುರಂತಕ್ಕೆ ಪೊಲೀಸರನ್ನು ಹೊಣೆಯಾಗಿಸಿ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡಿದರು. ಆದರೆ ಮುಡಾ ಹಗರಣ ಮಾಡಿದ ನಟೇಶ್ ಹಾಗೂ ದಿನೇಶ್‌ನ್ನು ರಕ್ಷಿಸಿದರು. ಪ್ರಿಯಾಂಕ್ ಖರ್ಗೆ ಆಪ್ತನ ಕಾರಿನಲ್ಲಿ ಅಫೀಮು ಮತ್ತು ಗಾಂಜಾ ಸಿಕ್ಕಿದಾಗ, ಖರ್ಗೆ ಅದನ್ನು ಮುಚ್ಚಲು ಯತ್ನಿಸಿದರು. ಈ ರೀತಿಯ ಕಳ್ಳಾಟ ಆಡುವವರು ಬೇರೆಯವರಿಗೆ ಹೇಗಿರಬೇಕೆಂದು ಪಾಠ ಮಾಡುತ್ತಾರೆ’ ಎಂದು ಟೀಕಿಸಿದರು.
ಮುಖಂಡರಾದ ಮಹೇಶ್ ರಾಜೇ ಅರಸ್, ಸಂತೋಷ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.