ADVERTISEMENT

ನಕ್ಸಲರ ಶಸ್ತ್ರಾಸ್ತ್ರ ಎಲ್ಲಿವೆಯೆಂದು ಗೊತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 23:30 IST
Last Updated 10 ಜನವರಿ 2025, 23:30 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

– ಪ್ರಜಾವಾಣಿ ಚಿತ್ರ

ಮೈಸೂರು: ‘ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆಯೆಂದು ಗೊತ್ತಿದೆ. ಪೊಲೀಸರು ಮಹಜರು ನಡೆಸಿ ತರಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ನಕ್ಸಲ್‌ವಾದ ಇರಬಾರದೆಂಬುದು ನಮ್ಮ ಉದ್ದೇಶ. ಅನ್ಯಾಯ, ಶೋಷಣೆಗಳ ವಿರುದ್ಧ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಹೋರಾಟ ಶಾಂತಿಯುತವಾಗಿರಬೇಕು. ಶಸ್ತ್ರಾಸ್ತ್ರ ಹೋರಾಟ ನಡೆಯಬಾರದು’ ಎಂದರು.

‘ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್‌ ಇದ್ದಾನೆಂಬುದು ಗೊತ್ತಿಲ್ಲ. ಇದ್ದರೆ, ಶರಣಾಗಿ ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡುವೆ’ ಎಂದು ‍ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

‘ದೆಹಲಿಯಲ್ಲಿ ಎಂಎಸ್‌ಪಿ ಕಾನೂನು ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈತರು ಮೃತಪಟ್ಟಿದ್ದರೂ ಸ್ಪಂದಿಸದ ಕೇಂದ್ರ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದೆ’ ಎಂದರು.

‘ಅಂಬೇಡ್ಕರ್ ಬಗ್ಗೆ ಬಿಜೆಪಿಯು ಎಂಥ ಗೌರವವಿಟ್ಟಿದೆಯೆಂಬುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯಿಂದ ತಿಳಿಯುತ್ತದೆ. ಈಗ  ಅಂಬೇಡ್ಕರ್ ಪರ ಅಭಿಯಾನ ಮಾಡುತ್ತಿರುವುದು ಹಾಸ್ಯಾಸ್ಪದ. ಸಂವಿಧಾನವನ್ನು ಕಾಂಗ್ರೆಸ್ ಬರೆಸಿರುವುದು ಅಂಬೇಡ್ಕರ್ ಕೈಯಲ್ಲಿ. ಅದಕ್ಕೆ ಗೌರವ ಕೊಡುತ್ತಿರುವುದೂ ನಾವೇ. ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿಸಿತ್ತು. ಅಟಲ್‌ ಬಿಹಾರಿ ವಾಜಪೇಯಿ ಕಾಲದಲ್ಲಿ ಬದಲಾಯಿಸಲು ಮುಂದಾಗಿತ್ತು’ ಎಂದು ಟೀಕಿಸಿದರು.

ರಸ್ತೆಗೆ ಹೆಸರಿಡಿ ಎಂದಿಲ್ಲ:

‘40 ವರ್ಷದಿಂದ ರಾಜಕಾರಣದಲ್ಲಿದ್ದು, ಯಾವುದೇ ರಸ್ತೆಗೆ ನನ್ನ ಹೆಸರಿಡಿ ಎಂದು ಯಾರಿಗೂ ಹೇಳಿಲ್ಲ, ಚರ್ಚಿಸಿಲ್ಲ. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಕೊಡಲು ಬಂದಾಗ, ನನಗೆ ಯೋಗ್ಯತೆಯಿಲ್ಲ ಎಂದಿದ್ದೆ. ಆ ರಸ್ತೆಗೆ ಬೇರೆ ಹೆಸರಿದ್ದರೆ ಬದಲಾವಣೆ ಬೇಡ‌’ ಎಂದು ಸ್ಪಷ್ಟಪಡಿಸಿದರು.

‘ಚಾಮರಾಜನಗರದಲ್ಲಿ ಫೆ.15ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಆ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆ’ ಎಂದರು. ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಶರಣಾಗತಿ ಕುರಿತ ಪ್ರಶ್ನೆಗೆ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.