ADVERTISEMENT

‘ಸ್ಮಾರ್ಟ್ ಮೀಟರ್ ಹಗರಣ ವಿಪಕ್ಷಗಳ ಸೃಷ್ಟಿ’: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 11:29 IST
Last Updated 4 ಜೂನ್ 2025, 11:29 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಸ್ಮಾರ್ಟ್‌ ಮೀಟರ್ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ವಿರೋಧ ಪಕ್ಷಗಳ ಆರೋಪ ನಿರಾಧಾರ. ದಾಖಲೆಗಳಿದ್ದರೆ ಸಾಬೀತುಪಡಿಸಲಿ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸವಾಲು ಹಾಕಿದರು.

‘ಯೋಜನೆಗೆ ಸರ್ಕಾರ ನೀಡಿರುವ ಒಟ್ಟು ಅನುದಾನವೇ ₹1,568 ಕೋಟಿ. ಹೀಗಿರುವಾಗ ₹15,578 ಕೋಟಿ ಎಲ್ಲಿಂದ ಬಂತು’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. 2019ರಲ್ಲಿ ಕೇಂದ್ರ ಎನ್‌ಡಿಎ ಸರ್ಕಾರವು ದೇಶದಾದ್ಯಂತ ಸ್ಮಾರ್ಟ್ ಮೀಟರ್ ಯೋಜನೆಯನ್ನು ಜಾರಿಗೆ ತಂದಿತು. ಹೀಗಾಗಿ ಇದರಲ್ಲಿ ಹಗರಣವೇನಾದರೂ ನಡೆದಿದ್ದರೆ ಆ ಕೀರ್ತಿ ಬಿಜೆಪಿ ನಾಯಕರಿಗೆ ಸಲ್ಲುತ್ತದೆ’ ಎಂದರು.

‘ವಿದ್ಯುತ್ ಸೋರಿಕೆ, ವಿದ್ಯುತ್ ಕಳ್ಳತನ, ಅಧಿಕ ಬಿಲ್ ತಡೆಯುವುದು ಈ ಮೀಟರ್ ಅಳವಡಿಕೆಯ ಉದ್ದೇಶವಾಗಿದೆ. ಕರ್ನಾಟಕ ಹಾಗೂ ತೆಲಂಗಾಣ ಹೊರತುಪಡಿಸಿ ದೇಶದಲ್ಲಿ 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಸ್ಮಾರ್ಟ್‌ ಮೀಟರ್ ಅಳವಡಿಸಿಕೊಂಡಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕರ್ನಾಟಕದಲ್ಲಿ ಪ್ರತಿ ಸ್ಮಾರ್ಟ್ ಮೀಟರ್‌ಗೆ ₹4,998 ಪಡೆಯಲಾಗುತ್ತಿದ್ದು, ಇದರೊಟ್ಟಿಗೆ ತಿಂಗಳಿಗೆ ₹75 ನಿರ್ವಹಣೆ ವೆಚ್ಚವನ್ನು ಸ್ವೀಕರಿಸಲಾಗುತ್ತಿದೆ. ರಾಜ್ಯದಲ್ಲಿ 4 ಲಕ್ಷ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಲಾಗುತ್ತಿದ್ದು, ಹೊಸತಾಗಿ ನಿರ್ಮಾಣ ಆಗುವ ಮನೆಗಳಿಗೆ ಅಳವಡಿಸಲಾಗುತ್ತಿದೆ. ಈಗಾಗಲೇ ಮೀಟರ್ ಇರುವವರು ಕೂಡ ಅಳವಡಿಸಿಕೊಳ್ಳಲು ಅವಕಾಶವಿದೆ’ ಎಂದರು.

‘ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಗುತ್ತಿಗೆ ಪಡೆದು ಬಹುದೊಡ್ಡ ಹಗರಣ ಮಾಡುತ್ತಿದ್ದಾರೆ’ ಎಂದು ಲಕ್ಷ್ಮಣ್‌ ಆರೋಪಿಸಿದರು.

‘ಸಹ್ಯಾದ್ರಿ ಎಲೆಕ್ಟ್ರಿಕಲ್ಸ್ ಕಂಪನಿಗೆ ಗುತ್ತಿಗೆ ತಿರಸ್ಕಾರವಾಗುತ್ತಿದ್ದಂತೆಯೇ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕಂಪನಿಯೊಂದಿಗೆ ಶಾಸಕರ ಸಂಬಂಧ ಏನು’ ಎಂದು ಪ್ರಶ್ನಿಸಿದರು.

‘ಈ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಬೇಕಿರುವುದು ಕೋಮುವಾದ. ಹಿಂದೂ ಮುಸ್ಲಿಂ ಅವರ ನಡುವೆ ಜಗಳ ಸೃಷ್ಟಿಸೋದು ವಿನಹ ಬೇರೇನು ಇಲ್ಲ. ಬಿಜೆಪಿಯ ಎಲ್ಲ ಶಾಸಕರು ಮುಸ್ಲಿಂಗಳೊಂದಿಗೆ ವ್ಯವಹಾರ ಮಾಡುತ್ತಾರೆ. ಆದರೆ, ಮಾಧ್ಯಮ ಮುಂದೆ ಬಂದು ಅವರಿಗೆ ಬೈಯುತ್ತಾರೆ’ ಎಂದರು. 

‘ನಟ ಕಮಲ್ ಹಾಸನ್ ಹೇಳಿಕೆ ದುರಂತ. ಅವರು ಕನ್ನಡಿಗರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಧ್ಯಮ ವಕ್ತಾರ ಕೆ. ಮಹೇಶ್, ಗಿರೀಶ್ ಇದ್ದರು. 

ಬಿಜೆಪಿ ಶಾಸಕರನ್ನು ಬಂಧಿಸಿ

‘ರಾಜ್ಯದ ಕರಾವಳಿಯಲ್ಲಿ ಶಾಂತಿ ಕದಡುತ್ತಿರುವ ಆರ್. ಅಶೋಕ್‌ ಸಿ.ಟಿ. ರವಿ ಹಾಗೂ ಬಿಜೆಪಿಯ ಶಾಸಕರನ್ನು ದೇಶದ್ರೋಹ ಕಾಯ್ದೆಯ ಅಡಿ ಬಂಧಿಸಬೇಕು ಇಲ್ಲವೇ ಗಡಿಪಾರು ಮಾಡಬೇಕು’ ಎಂದು ಎಂ. ಲಕ್ಷ್ಮಣ ಒತ್ತಾಯಿಸಿದರು. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ಸಮಸ್ಯೆಯಾಗಿಲ್ಲ. ಆದರೆ ಬಿಜೆಪಿಯವರಿಗೆ ಸಮಸ್ಯೆಯಾಗಿದೆ. ಕಲ್ಲಡ್ಕ ಪ್ರಭಾಕರ್ ಕಲ್ಲು ಹಾಕುವ ಬುದ್ಧಿಯವರು. ಅವರ ವಿರುದ್ಧ ದೂರು ದಾಖಲಿಸಿದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಹೀಗಿದ್ದಾಗ ಶಾಂತಿ ಕಾಪಾಡುವುದು ಹೇಗೆ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.